ಲೋಕಸಭೆ ಚುನಾವಣೆಗೂ ಮುನ್ನ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗುತ್ತಾ? ಕೇಂದ್ರ ಸಚಿವರಿಂದ ಸ್ಪಷ್ಟನೆ..!
ನವದೆಹಲಿ: ಕೇಂದ್ರ ಸರ್ಕಾರವು ಈಗಾಗಲೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ಇನ್ನು ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಇಳಿಕೆ ಮಾಡುತ್ತದೆ. ಆ ಮೂಲಕ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಈ ಕುರಿತು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ (Hardeep Singh Puri) ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಬೆಲೆ ಇಳಿಕೆ (Fuel Price Cut) ಕುರಿತು ಇದುವರೆಗೆ ತೈಲ ಕಂಪನಿಗಳ ಜತೆ ಮಾತುಕತೆ ನಡೆಸಿಲ್ಲ” ಎಂದಿದ್ದಾರೆ. ಹಾಗಾಗಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಹೇಳಲಾಗುತ್ತಿದೆ.
“ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಕುರಿತು ಇದುವರೆಗೆ ತೈಲ ಮಾರುಕಟ್ಟೆ ಕಂಪನಿಗಳ (OMC) ಜತೆ ಯಾವುದೇ ಮಾತುಕತೆ ನಡೆಸಿಲ್ಲ. ನಾವೀಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ. ಜಗತ್ತಿನಲ್ಲಿ ಎರಡು ಕಡೆ (ರಷ್ಯಾ-ಉಕ್ರೇನ್ ಬಿಕ್ಕಟ್ಟು) ಬಿಕ್ಕಟ್ಟು ಉದ್ಭವಿಸಿದೆ. ಕಳೆದ 7-10 ದಿನಗಳಲ್ಲಿ ಇಂಧನ ಸಾಗಣೆಗೆ ಸಮಸ್ಯೆಯಾಗುತ್ತಿದೆ. ಕೆಂಪು ಸಮುದ್ರದಿಂದ ಸುಯೇಜ್ ಕಾಲುವೆಯಲ್ಲಿ ಇಂಧನ ಸಾಗಣೆಗೆ ಭಾರಿ ದಟ್ಟಣೆ ಉಂಟಾಗುತ್ತಿದೆ. ಸಾಗರದಲ್ಲಿ ಶೇ.12ರಷ್ಟು ಸಾಗಣೆಯ ದಟ್ಟಣೆ ಉಂಟಾಗುತ್ತಿದೆ” ಎಂದು ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.
“ಇಂಧನ ಸಾಗಣೆಯಲ್ಲಿ ವ್ಯತ್ಯಯವಾದರೆ ಅದರಿಂದ ಇಂಧನ ಸಂಗ್ರಹಣೆಗೆ ಸಮಸ್ಯೆಯಾಗುತ್ತದೆ. ಆಗ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಗೆ ಸಮಸ್ಯೆಯಾಗುತ್ತದೆ. ಅದರಲ್ಲೂ, ದಿನನಿತ್ಯದ ಆಧಾರದ ಮೇಲೆ ಇಂಧನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಒಂದು ಬ್ಯಾರೆಲ್ ಬೆಲೆ ಏಕಾಏಕಿ 80 ಡಾಲರ್ ದಾಟುತ್ತದೆ. ಕೆಲವೊಮ್ಮೆ ಕಡಿಮೆಯಾಗುತ್ತದೆ. ಹಾಗಾಗಿ, ಇಂಧನ ಬೆಲೆಯಲ್ಲಿ ಸ್ಥಿರತೆ ಕಾಪಾಡುವುದು ಕಷ್ಟಸಾಧ್ಯವಾಗುತ್ತದೆ. ಇಂಧನದ ಲಭ್ಯತೆ ಹಾಗೂ ಪೂರೈಕೆಯಷ್ಟೇ ಈಗ ನಮಗಿರುವ ಆದ್ಯತೆ” ಎಂದಿದ್ದಾರೆ.
ವಿತ್ತಿಯ ಕೊರತೆಯ ಗುರಿಗೆ ಧಕ್ಕೆಯಾಗದಂತೆ ಆಹಾರ ಮತ್ತು ಇಂಧನಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿವಿಧ ಸಚಿವಾಲಯಗಳ ಬಜೆಟ್ಗಳಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು (12 ಬಿಲಿಯನ್ ಡಾಲರ್) ಮರುಹಂಚಿಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಬೆಲೆ ಏರಿಕೆಯೇ ವಿರೋಧ ಪಕ್ಷಗಳಿಗೆ ಪ್ರಧಾನ ಅಸ್ತ್ರವಾಗಬಹುದು ಎಂಬ ಅಂಶವನ್ನು ಆಧರಿಸಿ ಹಣದುಬ್ಬರ ತಡೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ ಎಂದು ತಿಳಿದುಬಂದಿದೆ. ಇದರ ಭಾಗವಾಗಿಯೇ ಇಂಧನ ಬೆಲೆ ಇಳಿಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.