ಸಿಬಿಐ ದುರ್ಬಳಕೆ ಮಾಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ; ಡಿಕೆ ಶಿವಕುಮಾರ್!
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಎಂಬ ಸುಳ್ಳು ಪ್ರಕರಣದಲ್ಲಿ ರಾಜ್ಯ ಸರಕಾರ ಸಿಬಿಐ ತನಿಖೆ ಅನುಮತಿ ಹಿಂಪಡೆದಿದ್ದರೂ ನನ್ನ ವಿರುದ್ಧ ಕಿರುಕುಳ ಮುಂದುವರಿದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳ ಮೂಲದ ಜೈ ಹಿಂದ್ ಚಾನೆಲ್ ಎಂಡಿ ಹಾಗೂ ತಮಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದರು.
ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರಕಾರ ರದ್ದುಪಡಿಸಿದ ಬಳಿಕವೂ ಸಬ್ ರಿಜಿಸ್ಟ್ರಾರ್ ಕಚೇರಿ, ಸರಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ ಸಹಿತ ಅನೇಕರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಡುತ್ತಿದ್ದಾರೆ, ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅರಿವಾಗುತ್ತಿದೆ ಎಂದು ಡಿಕೆಶಿ ದೂರಿದರು.
ಸಿಬಿಐ ತನಿಖೆಯನ್ನು ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ಸರಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ ಸಿಬಿಐ ಯಾಕೆ ನೋಟಿಸ್ ನೀಡುತ್ತಿದೆ? ಅವರ ಬಳಿ ನನ್ನ ಎಲ್ಲ ದಾಖಲೆಗಳಿವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐ, ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ತಮಗೆ ತಿಳಿದಿರುವ ಕಾನೂನಿನ ಅರಿವು ಎಂದರು.
ನನ್ನನ್ನು ಬಂಧಿಸುವ ಧೈರ್ಯ ಇದೆಯೇ: ಅಶೋಕ್ ಸವಾಲ್
ಬೆಂಗಳೂರು: ಸಿದ್ದರಾಮಯ್ಯ ಸರಕಾರವು ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಬಂಧಿಸುತ್ತಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದೆ ನಡೆದಿದ್ದ ರಾಮ ಮಂದಿರ ಪರ ಪ್ರಕರಣವನ್ನಿಟ್ಟುಕೊಂಡು ಇಬ್ಬರು ಹಿಂದೂ ಕಾರ್ಯಕರ್ತರನ್ನು ಬಂಧಿಸಿದೆ. ನಾನೂ ಅದೇ ಹೋರಾಟ ಮಾಡಿದ್ದೀನಿ, ರಾಮಮಂದಿರ ಆಗಬೇಕೆಂಬ ಹೋರಾಟದಲ್ಲಿ ನಾನೂ ಭಾಗವಹಿಸಿದ್ದೆ.ನನ್ನನ್ನು ಬಂಧಿಸುವ ಧೈರ್ಯ ಈ ಸರಕಾರಕ್ಕೆ ಇದೆಯೇ ಎಂದು ಸವಾಲ್ ಹಾಕಿದ್ದಾರೆ.
ಪ್ರಸ್ತುತ ಬಂಧನ ಕುರಿತು ಸ್ಪಷ್ಟನೆ ನೀಡಿರುವ ಗೃಹಸಚಿವ ಡಾ| ಜಿ. ಪರಮೇಶ್ವರ್, ವರ್ಷಗಳಿಂದ ಜೀವಂತವಾಗಿದ್ದ ಕೆಲವು ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸರಿಗೆ ಸರಕಾರ ಸೂಚನೆ ಕೊಟ್ಟಿತ್ತು. ಹುಬ್ಬಳ್ಳಿಯಲ್ಲಿ 32 ಪ್ರಕರಣಗಳು ಇದೇ ರೀತಿ ಬಾಕಿ ಇದ್ದವು. ಅವುಗಳನ್ನು ಇತ್ಯರ್ಥಪಡಿಸುವಾಗ ಆಕಸ್ಮಿಕವಾಗಿ ಈ ಪ್ರಕರಣವೂ ಬಂದಿದೆ.ಉದ್ದೇಶಪೂರ್ವಕವಾಗಿ ಯಾರನ್ನೂ ಗುರಿ ಮಾಡಿಲ್ಲ. ಆದರೆ, ಬಿಜೆಪಿಯವರು ಈ ರೀತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದಿದ್ದಾರೆ.