ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಆರೋಗ್ಯ ವಿಮೆ ಘೋಷಿಸಿದ ರಾಜ್ಯ ಸರ್ಕಾರ ; ಇಲ್ಲಿದೆ ಮಾಹಿತಿ
ಬೆಂಗಳೂರು, (ಡಿಸೆಂಬರ್ 29): ಅತಿಥಿ ಉಪನ್ಯಾಸಕರ (guest lecturer) ವೇತನವನ್ನು (Salary) 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ (karnataka government) ನಿರ್ಧರಿಸಿದೆ. ಈ ಬಗ್ಗೆ ವಿಕಾಸಸೌಧದಲ್ಲಿ ಇಂದು (ಡಿಸೆಂಬರ್ 29) ಸುದ್ದಿಗೋಷ್ಠಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ ಸಂಬಂಧ ಮಾತನಾಡಿದ ಸುಧಾಕರ್, ನಾವು ಅವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಖಾಯಂ ಅವರ ಪ್ರಮುಖ ಬೇಡಿಕೆ ಆಗಿದೆ. ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ವರ್ಕ್ಲೋಡ್ ಬಗ್ಗೆಯೂ ಸೂಚನೆ ನೀಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡಲಾಗುವುದು. ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುತ್ತೇವೆ. ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಇವರಿಗೆ ಕೃಪಾಂಕ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ. ಅತಿಥಿ ಉಪನ್ಯಾಸಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಅತಿಥಿ ಉಪನ್ಯಾಸಕರು ಮುಷ್ಕರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಮುಷ್ಕರದಿಂದ ತೊಂದರೆಯಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಸಿಎಂ ಸೂಚನೆ
ಬೆಂಗಳೂರು, (ಡಿಸೆಂಬರ್ 29): ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಇದಕ್ಕೆ ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂಪಾಯಿ ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು(ಡಿಸೆಂಬರ್ 29) ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಬೇಕು. ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರದ ವಿದ್ಯಾರ್ಥಿ ವೇತನ ಸ್ಥಗಿತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ವಿದ್ಯಾರ್ಥಿ ವೇತನ ಭರಿಸಲು ತೀರ್ಮಾನಿಸಿದ್ದು, 6.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಸಿದ್ಧವಾಗಿದೆ. ಆಯವ್ಯಯದಲ್ಲಿ ಈಗಾಗಲೇ 60 ಕೋಟಿ ರೂಪಾಯಿ ನಿಗದಿಯಾಗಿದೆ. ಅಲ್ಲದೇ ಇಲಾಖೆಗೆ ಲಭ್ಯ ಅನುದಾನದಲ್ಲೇ ಮರುಹಂಚಿಕೆ ಮಾಡಿ ಹೆಚ್ಚುವರಿ ಹಣ 40 ಕೋಟಿ ರೂ. ಭರಿಸಲು ಸೂಚನೆ ನೀಡಿದ್ದಾರೆ.
ಇನ್ನು ಅಲ್ಪಸಂಖ್ಯಾತರಿಗೆ ಸವಲತ್ತು ವಿತರಿಸುವ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಅರ್ಜಿ ಸ್ವೀಕೃತವಾಗಿದ್ದು, ಮುಂದಿನ ವರ್ಷ ಇದಕ್ಕೆ ಹೆಚ್ಚಿನ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.