ಹಿಜಾಬ್ ನಿಷೇಧ ಆದೇಶ ವಾಪಸ್’ಗೆ ಇನ್ನೂ ತೀರ್ಮಾನಿಸಿಲ್ಲ: ಸಿಎಂ ಸಿದ್ದರಾಮಯ್ಯ..!
ಮೈಸೂರು: ಹಿಜಾಬ್ ನಿಷೇಧ ಆದೇಶವನ್ನು ಇನ್ನೂ ಹಿಂಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಜಾಬ್ ನಿಷೇಧ ಆದೇಶಕ್ಕೆ ಇನ್ನೂ ತೀರ್ಮಾನಿಸಿಲ್ಲ.
ಯಾರೋ ಪ್ರಶ್ನೆ ಕೇಳಿದ್ರು. ಆಗ ಆದೇಶ ವಾಪಸ್ಸಿಗೆ ಯೋಚನೆ ಮಾಡುತ್ತೇನೆ ಅಂತಷ್ಟೇ ಹೇಳಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.
ಹಿಜಬ್ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್
ಮಂಡ್ಯ: ಹಿಜಬ್ (Hijab) ನಮ್ಮ ಸಂಸ್ಕೃತಿ, ನಮ್ಮ ಹಕ್ಕು, ಅದು ವಾಪಸ್ ಬರುತ್ತೆ ಎಂಬ ನಂಬಿಕೆಯಿದೆ. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ಇನ್ಮುಂದೆ ಅಣ್ಣ-ತಮ್ಮಂದಿರ ರೀತಿ ಬದುಕೋಣ ಎಂದು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ (Muskan) ಕರೆ ನೀಡಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ʻಜೈ ಶ್ರೀರಾಮ್ʼ ಘೋಷಣೆಗೆ ಕೂಗುತ್ತಿದ್ದ ಯುವರ ಗುಂಪಿಗೆ ವಿರುದ್ಧವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್, ಹಿಜಬ್ ನಿಷೇಧ ಆದೇಶ ವಾಪಸ್ ಪಡೆಯಬೇಕೆಂಬ ಸಿಎಂ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah), ಸಚಿವರಾದ ಜಮ್ಮೀರ್ ಅಹ್ಮದ್ ಖಾನ್, ಯು.ಟಿ ಖಾದರ್, ಡಿ.ಕೆ ಶಿವಕುಮಾರ್ ಎಲ್ಲರಿಗೂ ಧನ್ಯವಾದಗಳು. ನಮ್ಮ ಹಕ್ಕನ್ನು ವಾಪಸ್ ಕೊಟಿರುವುದಕ್ಕೆ ಧನ್ಯವಾದಗಳು. ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಅಣ್ಣ-ತಮ್ಮಂದಿರ ರೀತಿ ಕಾಲೇಜಿಗೆ ಹೋಗಿ ಓದುತ್ತಾ ಇದ್ದೆವು. ಅದೇ ರೀತಿ ಮುಂದೆಯೂ ಹೋಗಬೇಕು ಎಂದು ಮುಸ್ಕಾನ್ ಕೇಳಿಕೊಂಡಿದ್ದಾರೆ.
ಹಿಜಬ್ ನಮ್ಮ ಸಂಸ್ಕೃತಿ, ನಮ್ಮ ಹಕ್ಕು. ಹಕ್ಕು ವಾಪಸ್ ಬರುತ್ತೆ ಎಂಬ ನಂಬಿಕೆ ಇದೆ. ಹಿಜಬ್ ಅನ್ನೋದು ನಮ್ಮ ಧರ್ಮ. ಅದನ್ನು ನಾವು ಪಾಲನೆ ಮಾಡಬೇಕಾಗಿದೆ. ಹಿಜಬ್ ವಿವಾದದಿಂದ ಅನೇಕ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಸಹ ನಾನು ಸಹ ಒಂದು ವರ್ಷ ಕಾಲೇಜಿಗೇ ಹೋಗಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗ್ತೀನಿ. ಎಲ್ಲರೂ ಈಗ ಬಂದು ಪರೀಕ್ಷೆ ಬರೆಯಿರಿ ಎಂದು ಸಹ ವಿದ್ಯಾರ್ಥಿನಿಯರಿಗೂ ಕರೆ ನೀಡಿದ್ದಾರೆ.
ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ಮುಂದೆಯೂ ಸಹ ಹಾಗೇಯೇ ಇರೋಣ. ನಾವು ಮೊದಲಿನಿಂದಲೂ ಹಿಜಬ್ ಧರಿಸುತ್ತಿದ್ದೆವು. ಎಲ್ಲಾ ಧರ್ಮ ಒಂದೇ, ಮನುಷ್ಯರ ರೀತಿ ಬದುಕೋಣ. ಧರ್ಮಗಳ ನಡುವೆ ಸಂಘರ್ಷ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂದು ಏನಾಗಿತ್ತು?
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹುಡುಗರ ಗುಂಪೊಂದು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾಗ ಮುಸ್ಕಾನ್ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದರು. ಈ ಕುರಿತ ವೀಡಿಯೋ ತುಣುಕು ದೇಶಾದ್ಯಂತ ಸದ್ದು ಮಾಡಿತ್ತು.
ಅಂದು ಮುಸ್ಕಾನ್ ಹೇಳಿಕೊಂಡಿದ್ದೇನು?
ನಾನು ಎಂದಿನಂತೆ ಬುರ್ಕಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ನಾನು ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿದ್ದರು. ಉಳಿದ 90 ಪ್ರತಿಶತ ಯುವಕರು ಹೊರಗಿನಿಂದ ಬಂದವರಾಗಿದ್ದರು.
ಶಿಕ್ಷಣವೇ ನಮ್ಮ ಆದ್ಯತೆ. ಆದರೆ ಅವರು ಅದನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ತುಂಡು ಬಟ್ಟೆ ವಿಚಾರಕ್ಕೆ ನಮ್ಮ ಶಿಕ್ಷಣ ಹಾಳುಮಾಡಲು ಯತ್ನಿಸುತ್ತಿದ್ದಾರೆ. ನಾವು ಯಾವಾಗಲೂ ಬುರ್ಕಾ ಮತ್ತು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೆವು. ಕಾಲೇಜಿಗೆ ಬಂದಾಗ ಬುರ್ಕಾ ತೆಗೆದು, ಹಿಜಬ್ ಮಾತ್ರ ಹಾಕಿಕೊಂಡು ತರಗತಿಯಲ್ಲಿ ಕೂರುತ್ತಿದ್ದೆವು. ಯಾವಾಗಲೂ ಇದಕ್ಕೆ ವಿರೋಧ ಇರಲಿಲ್ಲ. ಆದರೆ ಒಂದು ವಾರದಿಂದ ಹಿಜಬ್‌ಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.