ಮಂಗಳೂರಿನ ಈ ಶಾಲೆಯಲ್ಲಿದ್ದಾರೆ ಬರೋಬ್ಬರಿ 17 ಜೋಡಿ ಅವಳಿ ಮಕ್ಕಳು..!
ಮಂಗಳೂರು: ಮಂಗಳೂರಿನ ಈ ಶಾಲೆಗೆ ನೀವೇನಾದರೂ ಬಂದರೆ ಇಲ್ಲಿ ಅವಳಿ ಜವಳಿ ವಿದ್ಯಾರ್ಥಿಗಳನ್ನು ನೋಡಿ ಆಶ್ಚರ್ಯಗೊಳ್ಳುವರಿ. ಏಕೆಂದರೆ ಇಲ್ಲಿ 17 ಅವಳಿ ಮಕ್ಕಳು ಕಲಿಯುತ್ತಿದ್ದಾರೆ.
ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಾರದಾ ಗಣಪತಿ ವಿದ್ಯಾಸಂಸ್ಥೆ ವಿಶೇಷ.
ಕೊರೊನಾದಿಂದ ಮೃತಪಟ್ಟವರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ಕೊಡುತ್ತಿರುವ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಸಂಸ್ಥೆ ಗಮನ ಸೆಳೆಯಲು ಕಾರಣವಾಗಿರುವುದು 17ಅವಳಿ ಮಕ್ಕಳು.
ಇದು ಕ್ಯಾಂಪಸ್ ಶೋಭೆ ಹೆಚ್ಚಿಸಿದೆ. ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳ ಗಮನ ಇತ್ತ ಕಡೆ ಹೊರಳಿದೆ.
ಯಾವ ತರಗತಿಯಲ್ಲಿ ಎಷ್ಟು?
ಅವಳಿ ಮಕ್ಕಳನ್ನು ಪ್ರಸವಿಸುವ ತಾಯಂದಿರ ಸಂಖ್ಯೆಯೇ ಕಡಿಮೆ ಆಗಿದ್ದು ಒಂದು ಜೋಡಿ ಅವಳಿ ಮಕ್ಕಳನ್ನು ಕಾಣುವುದೇ ಖುಷಿಯ ವಿಚಾರ. ಈ ಅವಳಿಗಳ ಪೈಕಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಒಂದು ಜೋಡಿಯಿದ್ದರೆ, ಒಂಬತ್ತರಲ್ಲಿ ಮೂರು ಜೋಡಿ, ಎಂಟರಲ್ಲಿ ಒಂದು ಜೋಡಿ, ಏಳರಲ್ಲಿ ಎರಡು ಜೋಡಿ, ಆರರಲ್ಲಿ ಮೂರು ಜೋಡಿ, ಪ್ರಥಮ ತರಗತಿಯಲ್ಲಿ ಒಂದು ಜೋಡಿ, ಯುಕೆಜಿಯಲ್ಲಿ ಮೂರು ಜೋಡಿ, ಎಲ್ ಕೆ ಜಿ ಯಲ್ಲಿ ಒಂದು ಜೋಡಿ, ಎರಡನೇ ತರಗತಿಯಲ್ಲಿ ಎರಡು ಜೋಡಿ ಅವಳಿ ಮಕ್ಕಳಿದ್ದಾರೆ. ಅದರಲ್ಲಿ ಆರು ಜೋಡಿ ಹೆಣ್ಣು ಮತ್ತು ಆರು ಜೋಡಿ ಗಂಡು ಮಕ್ಕಳಾಗಿದ್ದಾರೆ. ಐದು ಜೋಡಿ ಹೆಣ್ಣು-ಗಂಡು ಅವಳಿ ಇದ್ದಾರೆ.
ಇವರೇ ಆ ಮಕ್ಕಳು
ಬೋಳಿಯಾರಿನ ರಾಜೇಶ್ – ವಂದಿತಾ ದಂಪತಿ ಮಕ್ಕಳಾದ ಧನ್ಯಶ್ರೀ-ಧನುಶ್, ದೈಗೋಳಿಯ ಶ್ರೀಧರ್- ವಸಂತಿ ದಂಪತಿಯ ಮಕ್ಕಳಾದ ಸೃಜನ್-ಸುಹಾನ್, ಮಂಜನಾಡಿಯ ಪುರುಷೋತ್ತಮ ಮಲ್ಲಿ-ಪ್ರಭಾವತಿ ದಂಪತಿಯ ಮಕ್ಕಳಾದ ಚೈತ್ರಾ-ಚಂದನ್, ಮುಡಿಪಿನ ಸತೀಶ್ ಚಂದ್ರ ಆಳ್ವ-ಶ್ರೀವಿದ್ಯಾ ದಂಪತಿಯ ಮಕ್ಕಳಾದ ಶ್ರೀಯಾ-ಶೀಶಾ, ಪಡೀಲ್ ನ ರಮೇಶ್ ಭಂಡಾರಿ-ಅಮಿತಾ ಭಂಡಾರಿ ಮಕ್ಕಳಾದ ಸಂಜನಾ-ಸಂಜಯ್, ಬಾಕ್ರಬೈಲ್ ನ ಚಂದ್ರಹಾಸ್-ಚೈತನ್ಯ ದಂಪತಿಯ ಮಕ್ಕಳಾದ ಜ್ಞಾನೇಶ್ ಮತ್ತು ಜಯೇಶ್, ಕೊಡಕ್ಕಲು ಯುವರಾಜ್-ಸುಮಿತ್ರಾ ದಂಪತಿಯ ಮಕ್ಕಳಾದ ಲತೇಶ್ ಮತ್ತು ಲವೇಶ್, ಕೈರಂಗಳದ ಚಂದ್ರಶೇಖರ-ವಿಶಾಲಾಕ್ಷಿ ದಂಪತಿಯ ಮಕ್ಕಳಾದ ಭವ್ಯಶ್ರೀ ಮತ್ತು ದಿವ್ಯಶ್ರೀ, ಬಗಂಬಿಲದ ರಮೇಶ್-ಗಾಯತ್ರಿ ದಂಪತಿಯ ಮಕ್ಕಳಾದ ಕೀರ್ತಿ ಆರ್.ಗಟ್ಟಿ ಮತ್ತು ಕೀರ್ತನ್ ಆರ್.ಗಟ್ಟಿ, ಬೋಳಿಯಾರಿನ ರಾಜೇಶ್ ಮಡಿವಾಳ ಮತ್ತು ಹೇಮಲತಾ ಮಡಿವಾಳ ದಂಪತಿ ಮಕ್ಕಳಾದ ಚಾರ್ವಿ-ಚಿರಶ್ವೀ, ವಿದ್ಯಾನಗರ ಜಲ್ಲಿ ಕ್ರಾಸ್ ನ ರವಿರಾಜ್ -ಅರ್ಚನಾ ದಂಪತಿಯ ಮಕ್ಕಳಾದ ಆದ್ಯಾ ರವಿರಾಜ್ ಮತ್ತು ಆರಾಧ್ಯ ರವಿರಾಜ್, ಉತ್ತರ ಕನ್ನಡದ ಚಂದ್ರಕಾಂತ್- ಸೌಭಾಗ್ಯ ದಂಪತಿಯ ಮಕ್ಕಳಾದ ಸಾನ್ವಿ-ಸಾತ್ವಿಕ್, ಅಸೈಗೋಳಿಯ ದೇವರಾಜ್- ಸಂಧ್ಯಾ ದಂಪತಿಯ ಮಕ್ಕಳಾದ ಸಮೃಧ್ -ಸಂಹಿತ, ಮಾಡೂರಿನ ವಾಸುದೇವ-ವೀಣಾ ಗಟ್ಟಿ ದಂಪತಿಯ ಮಕ್ಕಳಾದ ಭವಿಷ್-ಭವಿತ್ , ಸುಳ್ಯಮೆಯ ಲೋಕೇಶ್ ಶೆಟ್ಟಿ- ಸುಜಾತಾ ದಂಪತಿಯ ಮಕ್ಕಳಾದ ರೋಹನ್-ರೋಹಿತ್ , ಕೈರಂಗಳ ಧರ್ಮಕ್ಕಿಯ ಅಶೋಕ್ ಮತ್ತು ಪುಷ್ಪಾ ದಂಪತಿಯ ಮಕ್ಕಳಾದ ಆದ್ಯಾ ಪಿ- ಆರಾಧ್ಯ ಪಿ. ಹಾಗೂ ಹೂಹಾಕುವ ಕಲ್ಲಿನ ರವಿ ಗಟ್ಟಿ ಶಶಿಕಲಾ ದಂಪತಿ ಮಕ್ಕಳಾದ ರಕ್ಷಣ್-ರಕ್ಷಿತ್ ಸೇರಿದಂತೆ ಒಟ್ಟು ಹದಿನೇಳುವಜೋಡಿ ಅವಳಿ ಮಕ್ಕಳಾಗಿದ್ದು ಈ ಶಾಲೆಯ ಕಣ್ಮಣಿಗಳಾಗಿ ಮಿಂಚುತ್ತಿದ್ದಾರೆ.
ವಿಶೇಷ ಪ್ರೀತ್ಯಾದಾರ
ಅವಳಿ ಜವಳಿ ಮಕ್ಕಳಿಗೆ ತುಳುನಾಡಿನಲ್ಲಿ ವಿಶೇಷವಾದ ಪ್ರೀತ್ಯಾದರಗಳಿವೆ. ಇಂದಿನ ಅವಳಿ ಜವಳಿ ದಿನಾಚರಣೆಯ ಸಂದರ್ಭ ಅವರಿಗೆ ಒಂದು ಪ್ರೀತಿ ತೋರಿಸುವ ಅವಕಾಶವಿದು.
ಒಂದೇ ರೀತಿಯ ಮಕ್ಕಳು ಒಟ್ಟಿಗೆ ನೋವು ನಲಿವನ್ನು ಅನುಭವಿಸುವುದು ಅವರನ್ನು ನೋಡಿ ತಂದೆ ತಾಯಿಯರು ಸಂಭ್ರಮಿಸುವದು ಕಣ್ಣಿಗೆ ಹಬ್ಬ.
ದಾಖಲೆ ಸಂಖ್ಯೆಯ 17ಅವಳಿ ಮಕ್ಕಳನ್ನು ಹೊಂದಿರುವುದು ನಮ್ಮ ಸಂಸ್ಥಗೆ ಹೆಮ್ಮೆ. ಅಂತಹ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಿ ಅವರ ಖುಷಿಯಲ್ಲಿ ಪಾಲ್ಗೊಳ್ಳಲು ನಮಗೆ ತುಂಬಾ ಖುಷಿ.
ಲವ ಕುಶರನ್ನು ನಿತ್ಯವೂ ಶಾಲೆಯಲ್ಲಿ ನೋಡುವುದು ಭಗವಂತನು ನಮಗೆ ನೀಡಿದ ವರಪ್ರಸಾದ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್
ನಮ್ಮ ವಿದ್ಯಾ ಕೇಂದ್ರ ಶಾರದಾ-ಗಣಪತಿ ಎನ್ನುವ ಅವಳಿ ದೇವರ ಹೆಸರನ್ನೇ ಹೊಂದಿದೆ. ಈ ಸಂಸ್ಥೆಯಲ್ಲಿ ಕಲಿಯುತ್ತಿರುವ ಹದಿನೇಳು ಅವಳಿ ಮಕ್ಕಳು ನಮ್ಮಲ್ಲಿ ಇರುವುದು ನಮಗೆ ಖುಷಿ ಕೊಟ್ಟಿದೆ. ಆ ಮಕ್ಕಳು ಸಂಸ್ಥೆಗೂ ಶೋಭೆ ತಂದಿದ್ದಾರೆ. ಆಟ-ಪಾಠ, ಸಂಸ್ಥೆ-ಸಮಾಜ, ವಿದ್ಯಾರ್ಥಿ-ಪೋಷಕ ಇನ್ನಷ್ಟು ವಿಚಾರಗಳಲ್ಲಿ ಜೊತೆಯಾಗಿ ಸಾಗುತ್ತಾ ಸಂಸ್ಥೆಯ ಕೀರ್ತಿ ವೃದ್ಧಿಸುವ ಪ್ರಯತ್ನ ನಮ್ಮದು ಎನ್ನುತ್ತಾರೆ ಪ್ರಾಂಶುಪಾಲ ಶ್ರೀಹರಿ.