ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬಹುದಿನದ ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯ ಜೊತೆಗೆ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.
ದಿಢೀರ್ ದೆಹಲಿಗೆ ಹೊರಟ ಫೈರ್ ಬ್ರ್ಯಾಂಡ್ ಲೀಡರ್ಸ್...!
ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಬ್ಬರೂ ಜೊತೆಗೂಡಿ ದೆಹಲಿಗೆ ಪಯಣ ಬೆಳೆಸಿದ್ದಾರೆ. ಭಾನುವಾರ ರಾತ್ರಿ 8.30ರ ವಿಮಾನದಲ್ಲಿ ಇಬ್ಬರು ಹಿಂದೂ ಫೈರ್ ಬ್ರ್ಯಾಂಡ್ಗಳು ರಾಷ್ಟ್ರ ರಾಜಧಾನಿಗೆ ಹಾರಿದ್ದಾರೆ.
ಈ ಇಬ್ಬರು ನಾಯಕರ ಜೊತೆಗೆ ಸಂಸದ ಸಂಗಣ್ಣ ಕರಡಿ ಕೂಡ ಅದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸದ್ಯ ಯತ್ನಾಳ್ ಹಾಗೂ ಅನಂತ್ ಕುಮಾರ್ ನಾಯಕರ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ಮಗ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿ (BJP) ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಬಳಿಕ ಯತ್ನಾಳ್ಗೆ ಸ್ವಪಕ್ಷ ವಿರುದ್ಧ ಇದ್ದ ಕೋಪ ಮತ್ತಷ್ಟು ಹೆಚ್ಚಾಗಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ದೆಹಲಿಗೆ ಹೋಗ್ತೀನಿ. ದೆಹಲಿಯಿಂದ ಕರೆ ಬರಬೇಕಿದೆ, ಬರುತ್ತೆ. ಮಂಗಳವಾರ ಕೇಂದ್ರ ಕಚೇರಿಯಿಂದ ಸೂಚನೆ ಕೊಟ್ಟಿದ್ದಾರೆ. ಹೈಕಮಾಂಡ್ ಕರೆ ಬಂದ ಕೂಡಲೇ ದೆಹಲಿಗೆ ಹೋಗ್ತೀನಿ. ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ ಎಂದಿದ್ದರು.
ದೆಹಲಿಗೆ (Delhi) ಹೋಗಿ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಹೇಳ್ತೀನಿ. ಇಬ್ಬರು ಮಹಾನುಭಾವರಿಂದ ರಾಜ್ಯ ಹಾಳಾಗಿದೆ. ಒಬ್ಬ ದೆಹಲಿಯವನು, ಇನ್ನೊಬ್ಬ ಕರ್ನಾಟಕದವನಿಂದ ರಾಜ್ಯ ಹಾಳಾಗಿದೆ. ಇಬ್ಬರು ಸಿಂಗ್ ಗಳು ಇದ್ದಾರೆ. ಅವರಿಂದ ರಾಜ್ಯ ಹಾಳಾಗಿದೆ, ಅದನ್ನೂ ಹೇಳ್ತೀನಿ ಎಂದು ತಿಳಿಸಿದ್ದರು.