ಸುಳ್ಯ: ಶಾಲೆಯ ಆವರಣದಲ್ಲಿ ನೇಣಾಕಿಕೊಂಡು ಆತ್ಮಹತ್ಯೆಗೆ ಶರಣಾದ ಎಸ್ಎಸ್ಎಲ್ಸಿ ವಿದ್ಯಾರ್ಥಿ..!
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಎಸ್ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಲಿಮಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಮೃತ ವಿದ್ಯಾರ್ಥಿಯಾಗಿದ್ದಾನೆ. .ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಮಂತ್ ಕಳೆದ ವರ್ಷ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿದ್ದ ಈತ ಸಾವಿನ ದವಡೆಯಿಂದ ಪಾರಾಗಿದ್ದ. ಈತನ ಚಿಕಿತ್ಸೆಗಾಗಿ ನೂರಾರು ದಾನಿಗಳು ಹಣಕಾಸು ನೆರವು ನೀಡಿದ್ದರು.
ಮಂಗಳೂರು : ಬಜ್ಪೆಯಲ್ಲಿ ಪುಟ್ಟ ಮಗುವಿನೊಂದಿಗೆ 24 ವರ್ಷದ ತಾಯಿ ಶರೀನಾ ಮಿಸ್ಸಿಂಗ್..!
ಮಂಗಳೂರು : ಮಂಗಳೂರು ಹೊರವಲಯದ ಬಜಪೆ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್ನ ಅಹ್ಮದ್ ಮಕ್ಸೂದ್ ಅವರ ಪತ್ನಿ ಶರೀನಾ ವೈ. (24) ಮತ್ತು ಮಗ ಮಹ್ಮದ್ ತೋಹಾರ್ (3) ಡಿ. 11ರಂದು ರಾತ್ರಿ ಕಾಣೆಯಾಗಿದ್ದು ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಹ್ಮದ್ ಮಕ್ಸೂದ್ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಯೂಸುಫ್ ಅವರ ಪುತ್ರಿ ಶರಿನಾ (24) ಅವರನ್ನು ವಿವಾಹವಾಗಿದ್ದರು. 3 ವರ್ಷದ ಗಂಡು ಮಗುವಿದ್ದು, ಶರೀನಾ 5 ತಿಂಗಳ ಗರ್ಭಿಣಿಯಾಗಿರುತ್ತಾರೆ. ದಂಪತಿ ಅನ್ಯೋನ್ಯವಾಗಿದ್ದು, ಡಿ. 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕೆಮರಾ ಪರಿಶೀಲಿಸಿದಾಗ ಮನೆ ಬಿಟ್ಟು ಹೋಗಿರುವುದು ದೃಢಪಟ್ಟಿದೆ.
ಶರೀನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟು ಹೋಗಿದ್ದಾರೆ. ಆದರೆ ಅವರ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ. ನೆರೆಕೆರೆ, ನೆಂಟರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್ ಮಕ್ಸೂದ್ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.