ಮಾಸ್ಟರ್ ಚೆಫ್ ಇಂಡಿಯಾ ಶೋನಲ್ಲಿ ಗೆದ್ದು ಅಪರೂಪದ ಮೈಲಿಗಲ್ಲು ಸಾಧನೆ ಮಾಡಿದ ಮಂಗಳೂರಿನ ಯುವಕ ಮೊಹಮ್ಮದ್ ಆಶಿಕ್..!
ಮಂಗಳೂರು: ಸೋನಿ ಟಿವಿ ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾ ಟ್ಯಾಲೆಂಟ್ ನಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಆಶಿಕ್ ಎಂಬ 24ರ ಹರೆಯದ ಯುವಕ ವಿನ್ನರ್ ಆಗಿ ಮೂಡಿಬಂದಿದ್ದಾರೆ.
ಅಕ್ಟೋಬರ್ 16ರಿಂದ ನಡೆದುಬಂದಿದ್ದ ರಿಯಾಲಿಟಿ ಶೋದಲ್ಲಿ ದೇಶಾದ್ಯಂತ ಚಾಲ್ತಿಯಲ್ಲಿರುವ ವಿಭಿನ್ನ ರೀತಿಯ ದೇಸಿ ಅಡುಗೆ ಮಾದರಿಗಳನ್ನು ತೋರಿಸುವುದು ಸವಾಲಾಗಿತ್ತು. ನಿಗದಿತ ಸಮಯದಲ್ಲಿ ಮಾಡಿ ತೋರಿಸಬೇಕಿದ್ದ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಯುವಕನೊಬ್ಬ ವಿನ್ನರ್ ಆಗಿದ್ದಾನೆ. ಆಮೂಲಕ ಮಂಗಳೂರಿನ ಯುವಕ ಅಪರೂಪದ ಮೈಲುಗಲ್ಲು ಎನ್ನಬಹುದಾದ ಸಾಧನೆಯನ್ನು ಮಾಡಿದ್ದು ದೇಶದ ಗಮನ ಸೆಳೆದಿದೆ.
ಮೊಹಮ್ಮದ್ ಆಶಿಕ್ ಪ್ರತಿಭಾನ್ವಿತ ಯುವಕನಾಗಿದ್ದರೂ, ಆರಂಭದಲ್ಲಿ ಹೊಟೇಲ್ ಮ್ಯಾನೇಜೆಂಟಿನಲ್ಲಿ ಗುರುತರ ಸಾಧನೆ ಮಾಡಲು ಹಣಕಾಸು ತೊಂದರೆ ಎದುರಾಗಿತ್ತು. ಇದನ್ನು ಮೆಟ್ಟಿ ನಿಲ್ಲಲು ತನ್ನದೇ ಆದ ವಿಶೇಷ ರೆಸಿಪಿಯುಳ್ಳ ಕುಲ್ಕಿ ಹಬ್ ಎನ್ನುವ ಜ್ಯೂಸ್ ಶಾಪ್ ಒಂದನ್ನು ಮಂಗಳೂರಿನಲ್ಲಿ ಆರಂಭಿಸಿದ್ದರು. ಸೋನಿ ಟಿವಿಯಲ್ಲಿ ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋದಲ್ಲಿ ಮೊಹಮ್ಮದ್ ಆಶಿಕ್ ಗಮನಸೆಳೆಯಲು ಪ್ರಯತ್ನ ಮಾಡಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರುತರ ಸಾಧನೆ ಮಾಡಿದ್ದಲ್ಲದೆ, ಮಾಸ್ಟರ್ ಚೆಫ್ ಕಿರೀಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಮೊಹಮ್ಮದ್ ಆಶಿಕ್ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ಈ ಹಿಂದಿನ ತಪ್ಪುಗಳನ್ನು ನಿವಾರಿಸಿಕೊಂಡು ಸಾಧನೆ ತೋರಲು ಬಂದಿದ್ದೇನೆ. ನಿಶ್ಚಿತ ಗುರಿ ಇಟ್ಟುಕೊಂಡೇ ಬಂದಿದ್ದು, ಈ ಬಾರಿ ಗೆದ್ದು ತೋರಿಸುತ್ತೇನೆ. ಬರೀಯ ಗೆಲ್ಲಲು ಬಂದಿರುವುದಲ್ಲ. ಈ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಸಾವಿರಾರು ಮಂದಿಯ ಕನಸು ಈಡೇರಿಸಲು ಬಂದಿದ್ದೇನೆ ಎಂದು ಈ ಹಿಂದೆ ಔಟ್ ಲುಕ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಮೊಹಮ್ಮದ್ ಆಶಿಕ್ ಅಭಿಪ್ರಾಯ ಪಟ್ಟಿದ್ದರು. ಮಾಸ್ಟರ್ ಚೆಫ್ ಇಂಡಿಯಾ ಸೀಸನ್ – 8 ಸೋನಿ ಲೈವ್ ನಲ್ಲಿ ಪ್ರಸಾರವಾಗಿದ್ದು, ಸೆಲೆಬ್ರಿಟಿ ಚೆಫ್ ಗಳಾದ ವಿಕಾಸ್ ಖನ್ನ, ರಣವೀರ್ ಬ್ರಾರ್, ಪೂಜಾ ಧಿಂಗ್ರಾ ತೀರ್ಪುಗಾರರಾಗಿದ್ದರು.