ಸರ್ಕಾರಿ ಬಸ್ ಮತ್ತು ಕಾರು ನಡುವೆ ಅಪಘಾತ ; ಒಂದೇ ಕುಟುಂಬದ ನಾಲ್ವರು ಸಹಿತ ಐವರು ಮೃತ್ಯು!
ಶಿರಸಿ: ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ (Government Bus) ಮತ್ತು ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ (Maruti Swift Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು (four from Single Family) ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttaran Kannada News) ಶಿರಸಿ ತಾಲೂಕಿನ ಬಂಡಲ ಎಂಬಲ್ಲಿ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಸ್ವಿಫ್ಟ್ ಕಾರಿನಲ್ಲಿದ್ದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಆದರೆ, ಪೂರ್ಣ ವಿವರ ತಿಳಿದಿಲ್ಲ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು. ಮತ್ತೊಬ್ಬರು ತಮಿಳುನಾಡಿನವರು ಎಂದು ಹೇಳಲಾಗಿದೆ. ಈ ನಡುವೆ, ಬಸ್ಸಿನ ಚಾಲಕನ ಭಾಗ ಕೂಡಾ ನಜ್ಜುಗುಜ್ಜಾಗಿದೆ, ಆದರೆ, ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಬಸ್ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ಬಸ್ಸಿಗೆ ಡಿಕ್ಕಿ ಹೊಡೆದ ಕಾರು ಬಸ್ಸಿನ ಮಧ್ಯ ಭಾಗಕ್ಕೆ ಹೋಗಿ ನಿಂತಿದೆ. ಬಸ್ ನಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರಿದ್ದು, ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು, ಇಬ್ಬರ ಸಜೀವ ದಹನ
ಬೆಳಗಾವಿ: ಟಿಪ್ಪರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಸಜೀವವಾಗಿ ದಹಿಸಿಹೋದ (Burnt Alive) ದಾರುಣ ಘಟನೆ ಬೆಳಗಾವಿ (Belagavi news) ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ನಡೆದಿದೆ.
ಒಂದೇ ಕುಟುಂಬದ ನಾಲ್ವರು ರಾತ್ರಿ ಬಂಬರಗಾ ಗ್ರಾಮಕ್ಕೆ ಕಾರಿನಲ್ಲಿ ಹೊರಟಿದ್ದು, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುತ್ತಿದ್ದರು. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ನ ಡಿಸೇಲ್ ಟ್ಯಾಂಕ್ ಒಡೆದು ಕೂಡಲೇ ಬೆಂಕಿ ಹೊತ್ತಿಕೊಂಡಿದೆ.
ಕ್ಷಣಾರ್ಧದಲ್ಲಿ ಕಾರು ಮತ್ತು ಟಿಪ್ಪರ್ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತ ದುರ್ದೈವಿಗಳು.
ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ಇವರನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಗಂಭೀರ ಗಾಯಗಳಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಆಗುತ್ತಿದ್ದಂತೆ ಟಿಪ್ಪರ್ ಡ್ರೈವರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ಬರ ಶವವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.