ಉಪ್ಪಿನಂಗಡಿ : ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು, ಪರಾರಿಯಾದ ಅಪರಿಚಿತ ವಾಹನ!
ನೆಲ್ಯಾಡಿ: ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಸಮೀಪ ಮಿನಿ ಲಾರಿಯೊಂದಕ್ಕೆ ಯಾವುದೋ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು ಈ ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.6ರ ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ .
ಮೃತಪಟ್ಟವರು ಹಾಸನ ನಿವಾಸಿಗಳು ಎಂದು ತಿಳಿದುಬಂದಿದೆ. ಮಿನಿ ಲಾರಿ ಹಾಸನದಿಂದ ಮಂಗಳೂರಿಗೆ ಬರುತ್ತಿತ್ತು. ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪ ಮಿನಿ ಲಾರಿಗೆ ಯಾವುದೋ ಘನ ವಾಹನ ಡಿಕ್ಕಿ ಯಾಗಿ ಪರಾರಿಯಾಗಿದೆ. ಘಟನೆಯಲ್ಲಿ ಮಿನಿ ಲಾರಿ ಸಂಪೂರ್ಣ ಜಖಂ ಗೊಂಡಿದೆ.
ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
80ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಇತ್ತೆ ಬರ್ಪೆ ಅಬೂಬಕ್ಕರ್ ಅರೆಸ್ಟ್
ಪುತ್ತೂರು ಡಿಸೆಂಬರ್ 06 : ಬರೊಬ್ಬರಿ 80ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಳ್ಳನನ್ನ ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ತಾಲ್ಲೂಕಿನ ವಾಟರ್ ಟ್ಯಾಂಕ್ ಸಮೀಪದ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಆಲಿಯಾನ್ ಇತ್ತೆ ಬರ್ಪೆ ಅಬೂಬಕ್ಕರ್.
ಆರೋಪಿ ವಾರದ ಹಿಂದೆ ಕೆದಿಲದ ರಮ್ಲಾಕುಂಞಿ ಎಂಬುವರ ಮನೆಯಿಂದ ₹ 2 ಲಕ್ಷ, ಇಸುಬು ಬ್ಯಾರಿ ಅವರ ಮನೆಯ ಅಂಗಳದಿಂದ ಸ್ಕೂಟಿ ಕಳವಾಗಿತ್ತು. ಸ್ಕೂಟಿ ಕಳವು ಮಾಡಿದ್ದ ಆರೋಪಿ, ರಮ್ಲಾಕುಂಞಿ ಮನೆಯಿಂದ ನಗದು ಹಣ ಕಳವು ಮಾಡಿ ಸ್ಕೂಟಿಯನ್ನು ಕೆದಿಲ ವ್ಯಾಪ್ತಿಯ ಬೇರೊಂದು ಕಡೆ ನಿಲ್ಲಿಸಿ ಪರಾರಿಯಾಗಿದ್ದ. ಸೋಮವಾರ ರಾತ್ರಿ ಸ್ಕೂಟಿ ತೆಗೆದುಕೊಂಡು ಹೋಗಲು ಕೆದಿಲಕ್ಕೆ ಬಂದಿದ್ದ ಅಬೂಬಕ್ಕರ್‌ನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಡಿ.19ರವರಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ವಿರುದ್ಧ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಸುರತ್ಕಲ್, ಕಾರ್ಕಳ, ಉಡುಪಿ, ಚಿಕ್ಕಮಗಳೂರಿನಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.