ಬಿಜೆಪಿ ಮುಖಂಡ ಪೃಥ್ವಿಸಿಂಗ್ಗೆ ಚಾಕು ಇರಿತ: ದೂರು ದಾಖಲು!
ಬೆಳಗಾವಿ, (ಡಿಸೆಂಬರ್ 05): ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ಗೆ ( prithvi singh) ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದೆ. ತಂದೆ ಪೃಥ್ವಿ ಸಿಂಗ್ ಪರವಾಗಿ ಮಗ ಜಸ್ವಿರ್ಸಿಂಗ್, ಬೆಳಗಾವಿಯ (Belagavi) ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಸುಜೀತ್ ಜಾಧವ್, ಇಬ್ಬರು ಗನ್ ಮ್ಯಾನ್, ಸದ್ದಾಂ ಎನ್ನುವವರ ವಿರುದ್ಧ ಕೊಲೆ ಯತ್ನ ಜಾತಿನಿಂದನೆ, ಹಾಗೂ ಜೀವಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿದೆ.
ದೂರಿನಲ್ಲೇನಿದೆ?
2018ರ ಚುನಾವಣೆಯಲ್ಲಿ ಜಯನಗರದ ನಮ್ಮ ಮನೆಯನ್ನ ಚುನಾವಣೆ ಕೆಲಸಕ್ಕೆ ತೆಗೆದುಕೊಂಡಿದ್ದರು. 10ಲಕ್ಷ ರೂಪಾಯಿಗೆ ಮನೆಯನ್ನು ಲೀಸ್ ಗೆ ಕರಾರು ಮಾಡಲಾಗಿತ್ತು. ಲೀಸ್ ಆಗಿದ್ದ ಕರಾರಿನ ಪ್ರಕಾರ ಅವರು ನಡೆದುಕೊಂಡಿಲ್ಲ. ನಾನು ಬಿಜೆಪಿ ಸೇರಿದ ಮೇಲೆ ರಾಜ್ಯ ಎಸ್ಸಿ ಮೋರ್ಚಾಗೆ ಅವಿರೋದ ಆಯ್ಕೆಯಾದೆ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ನಮ್ಮ ನಡುವಿನ ಸಂಬಂಧ ಸರಿಯಾಗಿ ಉಳಿಯಲಿಲ್ಲ. ಬಿಜೆಪಿ ಸೇರಿದ ಮೇಲೆ ಕೆಲವು ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಬರಲು ಶರುವಾದವು. 16/02/21 ರಂದು ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ಕೊಟ್ಟಿದ್ದೆ. ಡಿಸೆಂಬರ್ 04 ರಂದು ಚನ್ನರಾಜ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ ನನ್ನ ಬಳಿಯಿರುವ ಮೊಬೈಲ್ ಕಸಿದುಕೊಂಡರು. ಆಷ್ಟೊತ್ತಿಗೆ ನೂಕಾಟ ತಳ್ಳಾಟ ಪ್ರಾರಂಭವಾಯ್ತು. ಅಗ ಸುಜೀತ್ ನನ್ನ ಹಿಡಿದುಕೊಂಡ ಮತ್ತೊಂದೆಡೆ ಸದ್ದಾಂ ಹಲ್ಲೆ ಮಾಡಿದ್ದಾನೆ. ಹರಿತವಾದ ಆಯುಧದದಿಂದ ನನ್ನ ಕೈಗೆ ಹಲ್ಲೆ ಮಾಡಿದ್ದು, ಇದಕ್ಕೆ ಚನ್ನರಾಜ ಹಟ್ಟಿಹೊಳಿ ಪ್ರೋತ್ಸಾಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಹಿನ್ನೆಲೆ
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅತ್ಯಾಪ್ತ ಪೃಥ್ವಿ ಸಿಂಗ್ (55) ಅವರ ಮೇಲೆ ಜಯನಗರದಲ್ಲಿ ಚಾಕುವಿನಿಂದ ಹಲ್ಲೆ ನಡೆದಿತ್ತು. ಕಾಂಗ್ರೆಸ್ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ಆಪ್ತರು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಇದರ ಹಿಂದೆ ಚನ್ನರಾಜ ಹಟ್ಟಿಹೊಳಿ ಕೈವಾಡವಿರು ಮಾತುಗಳು ಕೇಳಿಬಂದಿದ್ದವು. ಸದ್ಯ ಪೃಥ್ವಿ ಸಿಂಗ್ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: 27 ಎಫ್ಐಆರ್ ದಾಖಲು, ತನಿಖೆಗೆ ಇಂಟರ್ಪೋಲ್ ನೆರವು ಕೋರಲಿದ್ದಾರೆ ಪೊಲೀಸರು
ಬೆಂಗಳೂರು, ಡಿಸೆಂಬರ್ 5: ಬೆಂಗಳೂರು ಮತ್ತು ಸುತ್ತಮುತ್ತಲಿನ 68 ಶಾಲೆಗಳಿಗೆ ನಕಲಿ ಬಾಂಬ್ ಬೆದರಿಕೆ ಇಮೇಲ್ (Bengaluru schools hoax bomb case) ಬಂದ ನಾಲ್ಕು ದಿನಗಳ ನಂತರ ಪೊಲೀಸರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಕೋರಿ ಕೇಂದ್ರೀಯ ತನಿಖಾ ದಳದ (CBI) ಇಂಟರ್ಪೋಲ್ ವಿಭಾಗಕ್ಕೆ ಪತ್ರ ಬರೆಯಲು ಪೊಲೀಸರು ನಿರ್ಧರಿಸಿದ್ದಾರೆ. ಪ್ರಗತಿ ಪರಿಶೀಲನೆಗಾಗಿ ಎಲ್ಲಾ ತನಿಖಾ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಮಂಗಳವಾರ ತಿಳಿಸಿದ್ದಾರೆ.
ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಕೂಡ ಇದೇ ರೀತಿಯ ಬೆದರಿಕೆ ಸಂದೇಶಗಳು ಶಾಲೆಗಳಿಗೆ ಬಂದಿದ್ದವು. ಆ ಪ್ರಕರಣಗಳಲ್ಲಿ ಕೆಲವು ಬಾಲಾಪರಾಧಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳಲ್ಲಿ ಅಂಥ ಯಾವುದೇ ಸಾಮ್ಯತೆಗಳಿವೆಯೇ ಎಂದು ಕಂಡುಹಿಡಿಯಲು ನಾವು ಎಲ್ಲಾ ತನಿಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ದಯಾನಂದ ಹೇಳಿದರು.
ಆರೋಪಿಯು beeble.com ನ ವಿವಿಧ ಇಮೇಲ್ ಐಡಿಗಳಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಬೆಂಗಳೂರು ಪೊಲೀಸರು ಆ ಕಂಪನಿಗೆ ಪತ್ರ ಬರೆದು ಅವರಿಂದ ವಿವರ ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ಕೋರಿ ಸಿಬಿಐನ ಇಂಟರ್ಪೋಲ್ ವಿಭಾಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಅಮೆರಿಕ, ಜರ್ಮನಿ, ಮಲೇಷ್ಯಾ ಮತ್ತು ಇತರ ದೇಶಗಳ ಶಾಲೆಗಳಿಗೆ ಕೂಡ ಇದೇ ರೀತಿಯ ಬೆದರಿಕೆ ಇಮೇಲ್ಗಳು ಬಂದಿದ್ದವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಡಿಸೆಂಬರ್ 1 ರಂದು ಬೆಂಗಳೂರಿನ 48 ಶಾಲೆಗಳು ಮತ್ತು ನೆರೆಯ ತಾಲೂಕುಗಳ 20 ಶಾಲೆಗಳಿಗೆ ಬೆದರಿಕೆ ಇಮೇಲ್ಗಳು ಬಂದಿದ್ದವು. ಪೊಲೀಸರು ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ.