ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ನಡೆದಿದೆ.
ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!
ಮೇಘಾಶ್ರೀ (18) ಮೃತ ವಿದ್ಯಾರ್ಥಿನಿ. ಈಕೆ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿ ಚುಂಚನಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.
ಮೇಘಾಶ್ರೀ ಹೋಂ ಸಿಕ್ಗೆ ಒಳಗಾಗಿದ್ದಳು. ಇದೇ ಕಾರಣದಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೇಘಾ ಶ್ರೀ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ!
ಚಿಕ್ಕಮಗಳೂರು: ನಾಯಿ (Dog) ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ (Acid Attack) ನಡೆಸಿರುವ ಘಟನೆ ಜಿಲ್ಲೆಯ ಎನ್ಆರ್ ಪುರ (NR Pura) ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.
ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು.
ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು. ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.
ಆಸಿಡ್ ದಾಳಿಗೆ ಸುಂದರ್ ರಾಜ್ ಮುಖ ಬಹುತೇಕ ಸುಟ್ಟಿದ್ದು ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಅರ್ಧ ಮುಖ ಸಂಪೂರ್ಣ ಸುಟ್ಟುಹೋಗಿದೆ. ಕೂಡಲೇ ಅವರನ್ನು ಎನ್ಆರ್ ಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಲ್ಲಿ ವೈದ್ಯರು ಸುಂದರ್ ರಾಜ್ ಅವರ ಎಡಗಣ್ಣಿನ ಪದರ ಸಂಪೂರ್ಣ ಡ್ಯಾಮೇಜ್ ಆಗಿದೆ, ಕಣ್ಣಿನ ಪದರವನ್ನು ಬದಲಾಯಿಸಬೇಕೆಂದು ತಿಳಿಸಿದ್ದಾರೆ. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಸುಂದರ್ ರಾಜ್ ಕುಟುಂಬ ಇದೀಗ ಚಿಕಿತ್ಸೆಯ ಹಣಕ್ಕಾಗಿ ಕಂಗಾಲಾಗಿದ್ದಾರೆ. ಆಸಿಡ್ ದಾಳಿ ಬಳಿಕ ಜೇಮ್ಸ್ ದಂಪತಿ ನಾಪತ್ತೆಯಾಗಿದ್ದಾರೆ. ಎನ್ಆರ್ ಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.