ಇಂದು ಮಿಜೋರಾಂ ಮತ ಎಣಿಕೆ ಆರಂಭ ; ಕಾಂಗ್ರೆಸ್ - ಬಿಜೆಪಿ ಬಿಟ್ಟು ಯಾವ ಪಕ್ಷ ಪ್ರಬಲ ಪೈಪೋಟಿಯಲ್ಲಿ...!
ಐಜ್ವಾಲ್: ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈಗ ಎಲ್ಲರ ಕಣ್ಣು ಮಿಜೋರಾಂ ಮೇಲೆ ನೆಟ್ಟಿದೆ. ಸೋಮವಾರ (ಡಿ.4) ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.
ರಾಜ್ಯಾದ್ಯಂತ 13 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಭಾನುವಾರ (ಡಿ.2) ಮಿಜೋರಾಂ ಜನರಿಗೆ ಪ್ರಮುಖ ಹಬ್ಬದ ದಿನವಿದ್ದ ಕಾರಣ ಮತ ಎಣಿಕೆ ಕಾರ್ಯವನ್ನು ಒಂದು ದಿನ ಮುಂದೂಡಲಾಗಿತ್ತು.
ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯಲ್ಲಿ 80.43% ಮತದಾನವಾಗಿದೆ. 79.61% ಪುರುಷರು, 81.21% ಮಹಿಳೆಯರು ಮತ ಚಲಾಯಿಸಿದ್ದಾರೆ. 2018ರ ಚುನಾವಣೆಯಲ್ಲಿ 81.61% ನಷ್ಟು ಮತ ಚಲಾಯಿಸಿದ್ದರು. 8.57 ಲಕ್ಷ ಮತದಾರರನ್ನು ಒಳಗೊಂಡಿರುವ ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಡುವೆ ಪೈಪೋಟಿ ನಡೆದಿದೆ. ಇನ್ನೂ ಕಾಂಗ್ರೆಸ್, ಬಿಜೆಪಿ ಈ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದ್ರೆ ಸ್ಥಳೀಯ ಪಕ್ಷಗಳೊಂದಿಗೆ ಕಾಂಗ್ರೆಸ್ ಸಹ ಪೈಪೋಟಿಯಲ್ಲಿರುವುದಾಗಿ ಸ್ಥಳೀಯ ನಾಯಕರು ತಿಳಿಸಿದ್ದಾರೆ.
ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈಗಾಗಲೇ 4 ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಜೋರಂನಲ್ಲಿ ಯಾರ ಪ್ರಭಾವ ಎಷ್ಟಿದೆ ಎನ್ನೋದು ಫಲಿತಾಂಶದ ನಂತರ ತಿಳಿಯಲಿದೆ.
12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ – 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ
ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ 6 ತಿಂಗಳು ಕೂಡ ಉಳಿದಿಲ್ಲ. ಈ ಹೊತ್ತಲ್ಲಿ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಲೋಕಸಭೆ ಚುನಾವಣಾ ರಾಜಕೀಯ ಸಮೀಕರಣಗಳು ಬದಲಾಗುವ ಎಲ್ಲಾ ಸಾಧ್ಯತೆಗಳು ಇವೆ. ಭಾರತದ ರಾಜಕೀಯ ಭೂಪಟದಲ್ಲಿ ಹಿಂದಿ ಹಾರ್ಟ್ಲ್ಯಾಂಡ್ ಎಂದು ಗುರುತಿಸಲಾದ ಎಲ್ಲಾ ಬಹುತೇಕ ರಾಜ್ಯಗಳು, ಈಶಾನ್ಯ ಭಾರತದ ಬಹುತೇಕ ರಾಜ್ಯಗಳು ಕೇಸರಿಮಯವಾಗಿವೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆದ್ದಿರೋದು ಕೇಸರಿ ಪಕ್ಷದ ವ್ಯಾಪ್ತಿಯನ್ನು ಹಿಗ್ಗಿಸಿದೆ. ಉತ್ತರ ಭಾರತದಲ್ಲಿ ಹಿಮಾಚಲ ಪ್ರದೇಶ ಹೊರತುಪಡಿಸಿದರೆ ಉಳಿದೆಲ್ಲೂ ಕಾಂಗ್ರೆಸ್ ಸ್ವಂತವಾಗಿ ಅಧಿಕಾರಲ್ಲಿಲ್ಲ. ಬಿಹಾರ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಅಲ್ಲಿ ಕಾಂಗ್ರೆಸ್ ಪ್ರಥಮ ಪಕ್ಷವಾಗಿಲ್ಲ. ಸದ್ಯ ಕರ್ನಾಟಕ, ಹಿಮಾಚಲ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಇದೆ. ವಿಶೇಷ ಎಂದರೆ, ದಕ್ಷಿಣ ಭಾರತದಲ್ಲೆಲ್ಲೂ ಬಿಜೆಪಿ ಅಧಿಕಾರದಲ್ಲಿಲ್ಲ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಇದು ನಿಜಕ್ಕೂ ಕಾಂಗ್ರೆಸ್ಗೆ ಮತ್ತು ಬಿಜೆಪಿಗೆ ಸವಾಲೇ ಸರಿ.
ಭಾರತದ ರಾಜಕೀಯ ಭೂಪಟ
* 12 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ
* ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ
* ಪಂಜಾಬ್, ದೆಹಲಿಯಲ್ಲಿ ಎಎಪಿ ಸರ್ಕಾರ
* 10 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರ
* ಜಮ್ಮು ಕಾಶ್ಮೀರ, ಲಡಾಖ್ನಲ್ಲಿ ರಾಷ್ಟ್ರಪತಿ ಆಳ್ವಿಕೆ