ಮಗನ ಆಟ ನೋಡಲು ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ರಾಹುಲ್ ದ್ರಾವಿಡ್!
ಮೈಸೂರು: ಏಕದಿನ ವಿಶ್ವಕಪ್ (World Cup) ಟೂರ್ನಿಯ ನಂತರ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮುಖ್ಯಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ತಮ್ಮ ಮಗನ ಸಲುವಾಗಿ ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ್ದಾರೆ.
ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮೈಸೂರು ವಲಯ ಆಯೋಜಿಸಿದ್ದ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯು ಮೈಸೂರಿನ (Mysuru) ಮಾನಸ ಗಂಗೋತ್ರಿಯ SDNR (ಶ್ರೀ ಕಂಠದತ್ತ ನರಸಿಂಹರಾಜ) ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ 19 ವಯೋಮಿತಿ ಕೂಚ್ ಬೆಹರ್ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.
ಕರ್ನಾಟಕ ಹಾಗೂ ಉತ್ತರಾಖಂಡ ನಡುವೆ ಮೈಸೂರಿನಲ್ಲಿ ಪಂದ್ಯ ನಡೆಯುತ್ತಿದ್ದು ಅದನ್ನು ವೀಕ್ಷಿಸುವ ನಿಟ್ಟಿನಲ್ಲಿ ದ್ರಾವಿಡ್ ಆಗಮಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ್ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗೆ 232 ರನ್ ಪೇರಿಸಿದೆ. 5 ಓವರ್ ಬೌಲಿಂಗ್ ಮಾಡಿರುವ ಸಮಿತ್ ದ್ರಾವಿಡ್ 2 ಮೇಡನ್ ಎಸೆದು 11 ರನ್ ನೀಡಿದ್ದಾರೆ.
ಆಲ್ರೌಂಡಡರ್ ಆಗಿರುವ ಸಮಿತ್ ಆಟವನ್ನು ನೋಡಲು ರಾಹುಲ್ ದ್ರಾವಿಡ್ ಮತ್ತು ಪತ್ನಿ ಡಾ.ವಿಜೇತ ಅವರೊಂದಿಗೆ ಮೈಸೂರಿಗೆ ಆಗಮಿಸಿದ್ದಾರೆ. ಕ್ರೀಡಾಂಗಣದ ಕಲ್ಲು ಹಾಸಿನ ಮೇಲೆ ಕುಳಿತು ದ್ರಾವಿಡ್ ಮಗನ ಆಟವನ್ನು ಗಮನಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದ ಅವರು ತಾವು ಇತರ ಮಕ್ಕಳ ಪೋಷಕರಂತೆ ನಾನು ಬಂದಿದ್ದೇನೆ ಎಂದು ಹೇಳಿದರು.
ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ಭಾರತ-ಆಸ್ಟ್ರೇಲಿಯಾ (Ind vs Aus) ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವು ಡಿಸೆಂಬರ್ 3ರಂದು (ನಾಳೆ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 11:45 ಗಂಟೆವರೆಗೂ ಮೆಟ್ರೋ (Namma Metro) ಸೇವೆ ಕಲ್ಪಿಸಲಾಗಿದೆ.
ನೇರಳೆ ಹಾಗೂ ಹಸಿರು ಮಾರ್ಗಗಳ (Green And Purple Line Metro) 4 ಟರ್ಮಿನಲ್ ಮೆಟ್ರೋ ನಿಲ್ದಾಣದಿಂದ ಹೊರಡುವ ರೈಲು ರಾತ್ರಿ 11.45ರ ವರೆಗೆ ಇರಲಿದೆ. ರಿಟರ್ನ್ ಜರ್ನಿ ಟಿಕೆಟ್‌ಗಳು ಭಾನುವಾರ ಮಧ್ಯಾಹ್ನ 2 ಗಂಟೆಯಿಂದಲೇ ಲಭ್ಯ ಇರಲಿದೆ.
ಇನ್ನೂ ಪೇಪರ್ ಟಿಕೆಟ್‌ಗಳು (Paper Tickets) ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರೋಡ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ದಿನದ ಒಂದು ಪ್ರಯಾಣಕ್ಕೆ ಸೀಮಿತವಾಗಿರಲಿದೆ. ಪೇಪರ್ ಟಿಕೆಟ್ ದರ 50 ರೂ. ಇರಲಿದೆ ಎಂದು ಮೆಟ್ರೋ ಆಡಳಿತ ಮಂಡಳಿ ತಿಳಿಸಿದೆ.
ಶುಕ್ರವಾರ ರಾತ್ರಿ ನಡೆದ ಭಾರತ-ಆಸೀಸ್ ನಡುವಿನ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. 175 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ 20 ರನ್‌ಗಳಿಂದ ಸೋಲನುಭವಿಸಿತು. ಈ ಮೂಲಕ ಭಾರತ ಸೂರ್ಯಕುಮಾರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಕೈವಶ ಮಾಡಿಕೊಂಡಿತು.