ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ!
ಬೆಂಗಳೂರು, (ಡಿಸೆಂಬರ್ 01): ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ(Bomb Threat) ಹಾಕಲಾಗಿದೆ. ಬೆಂಗಳೂರು, (ಡಿಸೆಂಬರ್ 01): ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಇನ್ನು ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ-ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಕಳೆದ 1 ವರ್ಷದಿಂದ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಲಾಗಿತ್ತು. ಆದರೂ ಸಹ ಈವರೆಗೂ ಬಾಂಬ್ ಬೆದರಿಕೆ ಹಾಕಿರುವವರ ಬಂಧನವಾಗಿಲ್ಲ. ಇದೀಗ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ. ಇನ್ನು ಇ-ಮೇಲ್ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯುಲ್ಲಿ ಸದಾಶಿವನಗರದಲ್ಲಿರುವ ನೀವ್ ಅಕಾಡೆಮಿ ಶಾಲೆಗೆ ರಜೆ ನೀಡಲಾಗಿದೆ. ನೀವ್ ಅಕಾಡೆಮಿ ಶಾಲೆಗೆ ಇಂದು ಆಡಳಿತ ಮಂಡಳಿ ರಜೆ ಘೋಷಿಸಿದೆ.
ಹುಸಿ ಬಾಂಬ್ ಬೆದರಿಕೆ ಎಂದ ನಗರ ಪೊಲೀಸ್ ಆಯುಕ್ತರು
ಇನ್ನು ಈ ಬಾಂಬ್ ಬೆದರಿಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳಿಸಿದ್ದೇವೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲೆಗೆ ಡಿಕೆ ಶಿವಕುಮಾರ್ ಭೇಟಿ
ಮಾಧ್ಯಮಗಳಲ್ಲಿನ ಸುದ್ದಿ ನೋಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸದಾಶಿವನಗರದಲ್ಲಿರುವ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿನ ಸುದ್ದಿ ನೋಡಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿರುವೆ. ಮನೆಯ ಬಳಿಯೇ ಇರುವ ಶಾಲೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಕಮಿಷನರ್ ಬಳಿಯೂ ಮಾಹಿತಿ ಪಡೆದಿದ್ದೇನೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಬೆಂಗಳೂರಿಗೆ ಶಾಲೆಗಳಿಗೆ ಬಾಂಬ್ ಬೆದರಿಕೆ: ಹೈ ಲೆವೆಲ್ ಟೆರರಿಸ್ಟ್ಗಳ ಕೈವಾಡ ಎಂದ ಆರ್.ಅಶೋಕ್
ಬೆಂಗಳೂರು, ಡಿ.1: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ (Bomb threat to Schools) ಹಾಕಿರುವುದರ ಹಿಂದೆ ಹೈಲೆವೆಲ್ ಉಗ್ರರ ಕೈವಾಡ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ. ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ವಿಚಾರವಾಗಿ ಬಸವೇಶ್ವರನಗರದಲ್ಲಿರುವ ನ್ಯಾಫಲ್ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.
ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಜತೆ ಮಾತನಾಡಿದ್ದೇನೆ. ಅಲ್ಲಾಗೆ ಮೋಸ ಮಾಡುತ್ತಿದ್ದಾರೆಂದು ಇ-ಮೇಲ್ ಪತ್ರದಲ್ಲಿ ಉಲ್ಲೇಖವಾಗಿದೆ. ದೇಶದಲ್ಲಿ ಅಲ್ಲಾಗೆ ಮೋಸ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಧರ್ಮಾಧರಿತವಾಗಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಗೊತ್ತಾಗುತ್ತಿದೆ. ಉಗ್ರವಾದ ಅರ್ಥದಲ್ಲಿ ಇ-ಮೇಲ್ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದರು.
ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಬಂದಿದೆ. ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ 15 ಶಾಲೆಗಳಿಗೆ ಮೇಲ್ ಬಂದಿದೆ. ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ನಾನು ಕೂಡ ಭೇಟಿ ಮಾಡಿದ್ದೇನೆ ಎಂದರು.
ಬಾಂಬ್ ಬೆದರಿಕೆ ಸಂದೇಶಗಳಿಗೆ ಕಾಂಗ್ರೆಸ್ ತುಷ್ಟೀಕರಣದ ನಡೆಯೇ ಕಾರಣ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಟ್ಟರ್ ಇಸ್ಲಾಮಿಕ್ ಸಂಘಟನೆಯಿಂದ ಇ-ಮೇಲ್ ಬಂದಿದೆ. ಬಹು ದೇವೋಪಾಸಕರಿಗೆ ಮತಾಂತರ ಆಗಿ. ಇಲ್ಲವೇ ಸಾಯಲು ಸಿದ್ಧವಾಗಿ ಅಂತಾ ಬೆದರಿಕೆ ಹಾಕಿದ್ದಾರೆ ಎಂದರು.