ಇಂದು ಭಾರತ - ಆಸ್ಟ್ರೇಲಿಯಾ ನಡುವೆ 4 ನೇ ಟಿ-20 ; ಆಸ್ಟ್ರೇಲಿಯದ ಪ್ರಮುಖ ಆಟಗಾರರು ತವರಿಗೆ!

ಇಂದು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆಕೊಂಡಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಕಾಂಗರೂ ಪಡೆಗೆ ಉಳಿದ ಎರಡೂ ಪಂದ್ಯ ಗೆಲ್ಲಲೇ ಬೇಕಿದೆ. ಕಳೆದ ಪಂದ್ಯದಲ್ಲಿ ಭಾರತ 200+ ರನ್ ಕಲೆಹಾಕಿದರೂ ಸೋಲುಂಡಿತ್ತು. ಹೀಗಾಗಿ ಟೀಮ್ ಇಂಡಿಯಾ ಯೋಜನೆ ರೂಪಿಸಿ ಕಣಕ್ಕಿಳಿಯಬೇಕಿದೆ. ಹೀಗೆ ಅನೇಕ ಕಾರಣಗಳಿಂದ ಉಭಯ ತಂಡಗಳ ಇಂದಿನ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಭಾರತಕ್ಕೆ ಶ್ರೇಯಸ್ ಅಯ್ಯರ್ ಬಲ:
ಉಪನಾಯಕ ಶ್ರೇಯಸ್ ಅಯ್ಯರ್ ಆಗಮನದಿಂದ ಮೆನ್ ಇನ್ ಬ್ಲೂ ಬ್ಯಾಟಿಂಗ್ ಬಲ ಹೆಚ್ಚಿದೆ. ಹೀಗಾಗಿ ತಿಲಕ್ ವರ್ಮ ತನ್ನ ಸ್ಥಾನವನ್ನು ಹಿರಿಯ ಬ್ಯಾಟರ್ಗೆ ಬಿಟ್ಟುಕೊಡಬೇಕಾಗುತ್ತದೆ. ಮತ್ತೊಂದೆಡೆ, ಪ್ರಸಿದ್ಧ್ ಕೃಷ್ಣ ಮತ್ತು ದೀಪಕ್ ಚಹಾರ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಸೂರ್ಯಕುಮಾರ್ ಯಾದವ್ಗೆ ತಲೆನೋವಾಗಿದೆ.
ಭಾರತ ಸರಣಿಯನ್ನು ಬ್ಯಾಕ್-ಟು-ಬ್ಯಾಕ್ ಗೆಲುವಿನೊಂದಿಗೆ ಪ್ರಾರಂಭಿಸಿತು. ಆದರೆ, ಕಳೆದ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಗಳಿಸಿದರೂ ಗ್ಲೆನ್ ಮ್ಯಾಕ್ಸ್ವೆಲ್ ಸ್ಫೋಟಕ ಆಟದಿಂದ ಸೋಲು ಕಂಡಿತು. ಮೆನ್ ಇನ್ ಬ್ಲೂ ಸೋಲಿನ ನಂತರ ಪುಟಿದೇಳಲು ಬೌಲಿಂಗ್ನಲ್ಲಿ ಬದಲಾವಣೆ ಮಾಡುವುದು ಬಹುತೇಕ ಖಚಿತ. ಉಳಿದಂತೆ ತಂಡದಲ್ಲಿ ಬದಲಾವಣೆ ಅನುಮಾನ.
ಆಸೀಸ್ಗೆ ಹಿರಿಯರ ಅನುಪಸ್ಥಿತಿ:
ಮೂರನೇ T20I ಮುಗಿದ ಬಳಿಕ ಅನೇಕ ಹಿರಿಯ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಆದ್ದರಿಂದ, ಆಸೀಸ್ 4 ನೇ T20I ನಲ್ಲಿ ಬದಲಾವಣೆ ಕಾಣಬಹುದು. ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ತವರಿಗೆ ಹಿಂತಿರುಗಿದ್ದಾರೆ. ಬದಲಿ ಆಟಗಾರರಾಗಿ ಬೆನ್ ಮೆಕ್ಡರ್ಮಾಟ್, ಜೋಶ್ ಫಿಲಿಪ್, ಬೆನ್ ದ್ವಾರ್ಶುಯಿಸ್ ಮತ್ತು ಕ್ರಿಸ್ ಗ್ರೀನ್ ಸೇರಿಕೊಂಡಿದ್ದಾರೆ. ಆಗಮಿಸಲಿರುವ ಹೆಚ್ಚಿನ ಆಟಗಾರರ ಇಂದು ಸ್ಥಾನ ಪಡೆಯುವ ನಿರೀಕ್ಷೆಯಿದೆ. ಹಲವಾರು ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಬೌಲಿಂಗ್ ವಿಭಾಗದಲ್ಲಿ ಕೂಡ ಆಸೀಸ್ ಗಮನಹರಿಸಬೇಕಿದೆ.
ರಾಯ್ಪುರ ಪಿಚ್ ರಿಪೋರ್ಟ್:
ಅನೇಕ ಭಾರತೀಯ ಪಿಚ್ಗಳು ಸಾಮಾನ್ಯವಾಗಿ ಬ್ಯಾಟರ್ಗಳಿಗೆ ಒಲವು ತೋರಿದರೆ, ರಾಯ್ಪುರದ ಟ್ರ್ಯಾಕ್ ಇದಕ್ಕೆ ವಿರುದ್ಧವಾಗಿದೆ. ಪಂದ್ಯದುದ್ದಕ್ಕೂ ಪಿಚ್ ನಿಧಾನವಾಗುವುದರಿಂದ ಬ್ಯಾಟರ್ಗಳು ಇಲ್ಲಿ ಸವಾಲುಗಳನ್ನು ಎದುರಿಸುವುದು ಖಚಿತ. ಇದು ಸ್ಪಿನ್ನರ್ಗಳಿಗೆ ಅನುಕೂಲಕರವಾಗಿದೆ. ವೇಗಿಗಳು ನಿಧಾನಗತಿಯಿಂದ ಬೌಲಿಂಗ್ ಮಾಡಬೇಕಾಗುತ್ತದೆ. ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇವಲ ಒಂದು ಅಂತರರಾಷ್ಟ್ರೀಯ ಪಂದ್ಯವಷ್ಟೆ ನಡೆದಿದೆ. ಹೀಗಾಗಿ ಪಿಚ್ ಯಾವರೀತಿ ವರ್ತಿಸುತ್ತದೆ ಎಂಬುದು ನೋಡಬೇಕಿದೆ. ಇಲ್ಲಿ ಆತಿಥ್ಯ ವಹಿಸಿರುವ 29 ಟಿ20 ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗಿಂತ ಚೇಸಿಂಗ್ ಮಾಡುವ ತಂಡಗಳು 16-13 ದಾಖಲೆ ಹೊಂದಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ.
ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್, ದೀಪಕ್ ಚಹಾರ್.
ಆಸ್ಟ್ರೇಲಿಯಾ ತಂಡ:
ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.