ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ!
ಹಾಸನ ನ.30: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು (Teacher) ದುರುಳರು ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ (Kidnap) ಘಟನೆ ಹಾಸನ (Hassan) ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. 15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ. ಮದುವೆ ಒಪ್ಪದ ಹಿನ್ನೆಲೆಯಲ್ಲಿ ಇಂದು (ನ.30) ಬೆಳಗ್ಗೆ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಆರೋಪ ಕೇಳಿಬಂದಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ನಿಮ್ಮ ಮಗಳನ್ನು ಮದವೆ ಮಾಡಿಕೊಡಿ ಎಂದು ರಾಮು ಮತ್ತು ಆತನ ಪೋಷಕರು ಕೇಳಲು ಬಂದಿದ್ದರು. ಆದರೆ ನಾವು ಕೊಡಲ್ಲ ಅಂತ ಹೇಳಿ ಕಳಿಸಿದ್ವಿ. ಕೊಡಲ್ಲ ಅಂದಿದ್ದಕ್ಕೆ ನನ್ನ ಮಗಳನ್ನ ಅಪರಣ ಮಾಡಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ ಮಾಡಲಾಗಿದೆ. ಸಂಬಂಧಿ ರಾಮು ಅಪಹರಣ ಮಾಡಿದ್ದಾನೆ ಎಂದು ಅರ್ಪಿತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ಹೇಳಿದರು.
ಹಸುಗೂಸು ಮಾರಾಟ ಪ್ರಕರಣ: ವಿಚಾರಣೆ ವೇಳೆ ಹೊರಬಿತ್ತು 250ಕ್ಕೂ ಹೆಚ್ಚು ಮಕ್ಕಳ ಮಾರಾಟ
ಬೆಂಗಳೂರು, ನ.30: ಹಸುಗೂಸು ಮಾರಾಟದ ಪ್ರಕರಣ (Child Sale Case) ಸಂಬಂಧ ಆರೋಪಿಗಳು ಇದುವರೆಗೆ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ವಿಚಾರ ಸಿಸಿಬಿ ಪೊಲೀಸರ (CCB Police) ತನಿಖೆಯಿಂದ ಹೊರಬಿದ್ದಿದೆ. ಮಾರಾಟ ಮಾಡಿದ ಮಕ್ಕಳ ಪೈಕಿ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ.
ಹಸುಗೂಸು ಮಾರಾಟ ಪ್ರಕರಣ ಸಂಬಂಧ ಬಂಧಿತ ಎಂಟು ಆರೋಪಿಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ, ಆರೋಪಿಗಳು ಕಳೆದ 6 ವರ್ಷಗಳಲ್ಲಿ 250 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ಈ ಪೈಕಿ ಕೇವಲ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರೆ.
ಆರೋಪಿಗಳು ಈ ವಿಚಾರವನ್ನು ಬಾಯಿಬಿಡುತ್ತಿದ್ದಂತೆ ಮತ್ತಷ್ಟು ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.
ಗ್ಯಾಂಗ್ ಲೀಡರ್ ಮಹಾಲಕ್ಷ್ಮೀ ಕಥೆಯೇ ರೋಚಕ
ಕರ್ನಾಟಕದ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀ ಕಥೆಯೇ ಒಂದು ರೀತಿ ರೋಚಕವಾಗಿದೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದಾಕೆ ಇವತ್ತು ಕೋಟ್ಯಾಧಿಪತಿಯಾಗಿದ್ದಾಳೆ. 2017 ರಿಂದಲೂ ಈ ದಂಧೆಯನ್ನು ಮಾಡುತ್ತಾ ಇರುವ ಮಹಾಲಕ್ಷ್ಮೀ, ಇಂದು ಸ್ವಂತ ಮನೆ, ಕಾರು ಜೊತೆಗೆ ಮೈತುಂಬಾ ಚಿನ್ನಾಭರಣ ಹೊಂದಿದ್ದಾಳೆ.
2015 ರಿಂದ 2017 ರವರೆಗೂ ಗಾರ್ಮೆಟ್ಸ್ನಲ್ಲಿ ಕೇವಲ 8 ಸಾವಿರ ಸಂಬಳಕ್ಕೆ ಕೆಲಸ ಮಾಡ್ತಾ ಮಾಡುತ್ತಿದ್ದಳು. ಈ ವೇಳೆ ಆಕೆಯ ಪರಿಚಯ ಆದ ಮಹಿಳೆ ಅಂಡಾಣು ಕೊಟ್ಟರೇ ಹಣ ಕೊಡುವುದಾಗಿ ಕೇಳಿದ್ದಳು. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು 20 ಸಾವಿರ ನೀಡಿದ್ದಳು. ನಂತರ ದಿನಗಳಲ್ಲಿ ಅಂಡಾಣು ಕೊಡುವರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳನ್ನು ಸೆರೆ ಹಿಡಿದದ್ದೇ ರೋಚಕ
ಪ್ರಕರಣ ಭೇದಿಸಲು ಸಿಸಿಬಿ ಅಧಿಕಾರಿಗಳು ಮಕ್ಕಳು ಕೊಳ್ಳುವ ಪೋಷಕರ ಸೋಗಿನಲ್ಲಿ ಥೇಟ್ ಫೀಲ್ಮ್ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟು ಆರೋಪಿಗಳನ್ನು ಸೆರೆ ಹಿಡಿದಿದ್ದರು. ಕುಡುಕನೋರ್ವ ನೀಡಿದ್ದ ಮಹತ್ವದ ಸುಳಿವು ಆಧರಿಸಿ ಬೇಟೆಗಿಳಿದಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದರು. ಈ ವೇಳೆ ವೈದ್ಯರಿಂದ ಹಿಡಿದು ಸರ್ಕಾರಿ ಅಧಿಕಾರಿಗಳವರೆಗೂ ಪ್ರಕರಣದಲ್ಲಿ ಲಿಂಕ್ ಇರುವುದು ಪತ್ತೆಯಾಗಿದೆ. ಅವ್ಯಾಹತವಾಗಿ ಪಸರಿಸಿಕೊಂಡಿರುವ ಬೃಹತ್ ಜಾಲದಲ್ಲಿ ವೈದ್ಯರೇ ಕಿಂಗ್ ಪಿನ್ಗಳಾಗಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಕ್ಕಳ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರಿ ಅಧಿಕಾರಿ ಕೂಡ ಶಾಮೀಲಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಾರಾಟವಾಗುವ ಮಕ್ಕಳ ನಕಲಿ ದಾಖಲೆ ಸೃಷ್ಟಿಸಿ ಕರಾಳ ದಂಧೆ ನಡೆಯುತ್ತಿರುವ ಬಗ್ಗೆ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ. ಸದ್ಯ ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ ಚುರುಕುಗೊಳಿಸಿದೆ.