ಪ್ರಿನ್ಸಿಪಾಲ್ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!
ಹಾವೇರಿ: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (First PU Student) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Self Immolation) ಮಾಡಿಕೊಂಡ (Student death) ಭೀಕರ ಘಟನೆ ಹಾವೇರಿ ಜಿಲ್ಲೆಯ (Haveri News) ಹಾನಗಲ್ ತಾಲೂಕಿನ ಡೊಳ್ಳೆಶ್ವರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಕಾಲೇಜಿನ ಪ್ರಿನ್ಸಿಪಾಲ್ ಅವರ ಕಿರುಕುಳವೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.
ಹಾನಗಲ್ ಪಟ್ಟಣದ ಎನ್ ಸಿಜೆಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಆದಿತ್ಯ ರಘುವೀರ ಚವ್ಹಾಣ (16) ಆತ್ಮಹತ್ಯೆ ಮಾಡಿಕೊಂಡವನು. ಆತ ಮಂಗಳವಾರ ಸಂಜೆ ತನ್ನ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ.
ಆದಿತ್ಯ ಎನ್ ಸಿಜೆಸಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ. ಆತ ಪ್ರಾಂಶುಪಾಲರ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಪ್ರಾಂಶುಪಾಲೆ ಅನಿತಾ ಹೊಸಮನಿ ಅವರು ಕಿರುಕುಳ ನೀಡಿದ್ದಾರೆ ಎನ್ನುವುದು ಮನೆಯವರ ಆರೋಪ.
ಅದಿತ್ಯನಿಗೆ ಪ್ರಿನ್ಸಿಪಾಲ್ ಬೈದಿದ್ದು, ಅದರಿಂದ ನೋವನುಭವಿಸಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಿನ್ಸಿಪಾಲರು ಆದಿತ್ಯನಿಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಅಪಮಾನ ಮಾಡಿದ್ದಾರೆ ಎಂದು ಮನೆಯವರು ಹೇಳುತ್ತಾರೆ.
ಈ ನಡುವೆ ಆದಿತ್ಯ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ, ಇದಕ್ಕಾಗಿ ಪ್ರಿನ್ಸಿಪಾಲರು ಕರೆದು ಬುದ್ಧಿ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕೂಡಾ ಹೇಳಲಾಗುತ್ತಿದೆ.
ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋದ ಆದಿತ್ಯನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿರುವಾಗಲೇ ತನ್ನ ಸಾವಿಗೆ ಸಂಬಂಧಿಸಿ ಆದಿತ್ಯ ಮಾತನಾಡಿರುವ ವಿಡಿಯೋಗ ಈ ಜಾಲತಾಣದಲ್ಲಿ ಹರಿದಾಡುತ್ತಿದೆ.