ವಿಶಾಖಪಟ್ಟಣಂ ಬಂದರಿನಲ್ಲಿ ದೋಣಿಗಳಿಗೆ ಬೆಂಕಿ ತಗುಲಿ 40 ದೋಣಿ ಭಸ್ಮ..!

ಅಮರಾವತಿ: ವಿಶಾಖಪಟ್ಟಣಂನ (Visakhapatnam) ಬಂದರಿನಲ್ಲಿ (Fishing Harbour) ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 40 ಮೀನುಗಾರಿಕಾ ದೋಣಿಗಳು (Boat) ಸುಟ್ಟು ಭಸ್ಮವಾಗಿವೆ.
ಘಟನೆಯಲ್ಲಿ ಸುಮಾರು 30 ಕೋಟಿ ರೂ. ನಷ್ಟವಾಗಿದೆ. ಕೆಲವು ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರರು ಶಂಕಿಸಿದ್ದಾರೆ. ಘಟನೆಯ ಬಳಿಕ ಅಗ್ನಿಶಾಮಕ ದಳ ಬೆಂಕಿ ಆರಿಸಲು ಹರಸಾಹಸ ಪಟ್ಟರು. ಕೆಲವು ದೋಣಿಗಳಲ್ಲಿ ಸಿಲಿಂಡರ್, ಇಂಧನ ಟ್ಯಾಂಕ್ಗಳಿಗೆ ಬೆಂಕಿ ತಗುಲಿದ್ದರಿಂದ ಅವಘಡ ಸಂಭವಿಸಿದ್ದು, ಪ್ರದೇಶದ ಜನರು ಘಟನೆಯಿಂದ ಭೀತಿಗೊಂಡರು.
ರಾತ್ರಿ 11:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ರೆಡ್ಡಿ ತಿಳಿಸಿದ್ದಾರೆ. ದೋಣಿಗಳಲ್ಲಿನ ಸಿಲಿಂಡರ್ಗಳು ಸ್ಫೋಟಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ನಾವು ಜನರನ್ನು ದೂರವಿರಲು ಕೇಳುತ್ತಿದ್ದೇವೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿವೆ. ಬೆಂಕಿಗೆ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಆನಂದ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಆಟಿಕೆ ವಸ್ತುಗಳಿದ್ದ ಗೋದಾಮು ಧಗಧಗ – ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆ ರೆಸ್ಕ್ಯೂ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಗ್ನಿ ಅವಘಡ (Fire Accident) ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಆಟಿಕೆ ವಸ್ತುಗಳಿದ್ದ ಗೋದಾಮು ಧಗಧಗ ಹೊತ್ತಿ ಉರಿದಿದ್ದು, ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.
ಕುಂಬಾರಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಈ ಅಗ್ನಿ ಅವಘಡ ಸಂಭವಿಸಿದ್ದು, ಐದು ಅಂತಸ್ತಿನ ಕಟ್ಟಡದಲ್ಲಿ 3 ಅಂತಸ್ತು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ನೀರು ಹಾಕಿದಷ್ಟು ಹೆಚ್ಚಾಗಿ ಬೆಂಕಿ ಉರಿಯುತ್ತಿದೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಗೋಡೌನ್ನಿಂದ ಮೇಲಿನ ಕಾರಿಡಾರ್ಗೆ ಮಹಿಳೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿ ಹಂತ ಹಂತವಾಗಿ ಆವರಿಸಿಕೊಳ್ಳುತ್ತಿತ್ತು. ಈ ವೇಳೆ ಸ್ಥಳೀಯರ ಸಹಾಯದಿಂದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.
ಹೊಗೆ ಮಧ್ಯೆ ಏಣಿ ಏರಿ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರೆಲ್ಲ ಪಕ್ಕದ ಕಟ್ಟಡದಿಂದ ಏಣಿ ಇಟ್ಟಿದ್ದು, ಅದೇ ಏಣಿ ಏರಿ ಬರುವ ಮೂಲಕ ಮಹಿಳೆ ಭಾರೀ ಅವಘಡದಿಂದ ಪಾರಾಗಿದ್ದಾರೆ. ಕಟ್ಟಡದ ನಾಲ್ಕನೇ ಫ್ಲೋರ್ ನಲ್ಲಿಯೂ ಬೆಂಕಿಯ ಜ್ವಾಲೆ ಆವರಿಸಿದೆ.