ಉಡುಪಿ ನಾಲ್ವರನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಕಿಲ್ಲರ್, ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ; ಯಾಕೆ ನಡೆಯಿತು ಈ ಕೊಲೆ..?
ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ ಸಣ್ಣ ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಕಾರ್ಯಾಚರಣೆಯು ಗಮನ ಸೆಳೆದಿದೆ.
ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಅರುಣ್ ಚೌಗಲೆ ಬಂಧಿತ ಆರೋಪಿ. ಕೊಲೆಯಾದವರ ಪೈಕಿ ಅಯ್ನಾಜ್ ಎಂಬ ಯುವತಿ ಗಗನಸಖಿಯಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆರೋಪಿ ಕೂಡ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅಯ್ನಾಜ್ಗೆ ಆತ್ಮೀಯವಾಗಿದ್ದ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
ಮೊದಲಿಗೆ ಮೃತರ ಮೊಬೈಲ್ಗೆ ಯಾವೆಲ್ಲಾ ಕರೆಗಳು ಬಂದಿದ್ದವು, ಅವರು ಯಾರ ಜತೆ ಮಾತನಾಡಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ನಂತರ ಯುವತಿಯರ ಒಡನಾಡಿಗಳು, ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ. ಬಳಿಕ ಯುವತಿ ಅಯ್ನಾಜ್ ಕೆಲಸ ಮಾಡುತ್ತಿದ್ದ ಏರ್ಪೋರ್ಟ್ನಲ್ಲೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆಯೇ ಯುವತಿ ಜತೆ ಚೆನ್ನಾಗಿದ್ದ ಆರೋಪಿ ಅರುಣ್ ಚೌಗಲೆ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ನಂತರ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬೆಳಗಾವಿಯ ಸಂಬಂಧಿ ಮನೆಯಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಯಾಕೆ ನಡೆಯಿತು ಈ ಕೊಲೆ?
ಕಿರಿಯ ಮಗಳು ಏರ್ ಹೋಸ್ಟೆಸ್ ಆಗಿರುವ ವಿಮಾನ ನಿಲ್ದಾಣದಲ್ಲಿ ಪ್ರವೀಣ್ ಚೌಗಲೆ ಕೆಲಸ ಮಾಡುತ್ತಿದ್ದ. ಅವರಿಬ್ಬರ ಮಧ್ಯೆ ಯಾವ ರೀತಿಯ ಆತ್ಮೀಯತೆ ಇತ್ತು ಎನ್ನುವುದು ತಿಳಿದಿಲ್ಲ. ಈ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬೆಳಗಾವಿಯಿಂದ ಬಂಧಿಸಿದ್ದಾರೆ. ಕೊಲೆಗೆ ನಿಖರವಾದ ಮಾಹಿತಿ ಇನ್ನೂ ದೊರಕಿಲ್ಲ ತನಿಖೆ ಬಳಿಕ ಎಲ್ಲಾ ಮಾಹಿತಿ ಹೊರಬೀಳಬೇಕಾಗಿದೆ. ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕಟಣೆಯಾಗದೇ ಆರೋಪಿಯನ್ನು ತನಿಖೆ ನಡೆಸಿದ ನ೦ತರ ಮಾಹಿತಿ ತಿಳಿಯಬೇಕಾಗಿದೆ.
ಘಟನೆಯ ವಿವರ :
ಕೆಮ್ಮಣ್ಣು ನೇಜಾರಿನ ನಿವಾಸಿ ನೂರ್ ಮಹಮ್ಮದ್ ಅವರ ಕುಟುಂಬದ ಮೇಲೆ ಈ ಭೀಕರ ದಾಳಿ ನಡೆದಿತ್ತು. ನೂರ್ ಮಹಮ್ಮದ್ ಅವರು ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್ (23), ಅಯ್ನಾಜ್ (21) ಮತ್ತು ಅಸೀಮ್ (14) ಅವರನ್ನು ಆಗಂತುಕನೊಬ್ಬ ಭಾನುವಾರ ಬೆಳಗ್ಗೆ ಕೊಲೆ ಮಾಡಿದ್ದ. ಅಫ್ನಾನ್ ಅವರು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ. ಕುಟುಂಬದ ಹಿರಿಯ ಮಗ ಅಸಾದ್ ಬೆಂಗಳೂರಿನಲ್ಲಿ ಇಂಡಿಗೋ ಏರ್ಲೈನ್ಸ್ನಲ್ಲಿ ಕೆಲಸ ಮಾಡುತ್ತಿದ್ದ.
ಭಾನುವಾರ ಮುಂಜಾನೆ 8.30ರ ಸುಮಾರಿಗೆ ಪ್ರವೀಣ್ ಚೌಗಲೆ ಉಡುಪಿಯ ಸಂತೆಕಟ್ಟೆಯಿಂದ ರಿಕ್ಷಾ ಮಾಡಿಕೊಂಡು ಈ ಮನೆಗೆ ಬಂದಿದ್ದ. ಬಂದವನೇ ಮನೆಗೆ ನುಗ್ಗಿ ಹಸೀನಾ, ಅಫ್ನಾನ್, ಅಯ್ನಾಜ್ ಮತ್ತು ಅಸೀಮ್ ಅವರನ್ನು ಕಿಚನ್, ಬೆಡ್ರೂಂ, ಬಾತ್ ರೂಂ ಬಳಿ ಮತ್ತು ಹಾಲ್ನಲ್ಲಿ ಇರಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಮಟ್ಟಿಗೆ ಬೋಳುಮಂಡೆ ಮತ್ತು ಕಂದು ಬಣ್ಣದ ಷರಟು ಧರಿಸಿದ್ದ ಚೌಗಲೆ ಅಲ್ಲಿಂದ ಮರಳಿ ಉಡುಪಿಗೆ ಬಂದು ಅಲ್ಲಿಂದ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಐದು ತಂಡಗಳನ್ನು ರಚಿಸಲಾಗಿತ್ತು. ಇದೀಗ ಒಂದು ತಂಡ ಆತನನ್ನು ಬೆಳಗಾವಿಯಲ್ಲಿ ಸೆರೆ ಹಿಡಿದಿದೆ.