ಶತಕ ಸಿಡಿಸಿ ಅಬ್ಬರಿಸಿದ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ; ನೆದರ್ಲ್ಯಾಂಡ್ ಗೆ 411 ರನ್ ಗಳ ಟಾರ್ಗೆಟ್!
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂದಕ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.
ತಮ್ಮ ಇನ್ನಿಂಗ್ಸ್ನಲ್ಲಿ 94 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 10 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 128 ರನ್ ಚಚ್ಚಿದರು.
ಇದು ಈ ಮೆಗಾ ಈವೆಂಟ್‌ನಲ್ಲಿ ಅಯ್ಯರ್ ಅವರ ಮೂರನೇ ಸತತ 50ಪ್ಲಸ್ ಸ್ಕೋರ್ ಆಗಿದೆ. ಭಾರತ 129 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ಗೆ ಬಂದ ಅಯ್ಯರ್, ವಿರಾಟ್ ಕೊಹ್ಲಿ ಅವರೊಂದಿಗೆ 71 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.ಇದುವರೆಗೆ 56 ಏಕದಿನ ಪಂದ್ಯಗಳನ್ನಾಡಿರುವ ಅಯ್ಯರ್, 47 ಪ್ಲಸ್ ಸರಾಸರಿಯಲ್ಲಿ 2,190 ರನ್ ಗಳಿಸಿದ್ದಾರೆ. ಇದು ಅಯ್ಯರ್ ಅವರ ನಾಲ್ಕನೇ ಏಕದಿನ ಶತಕವಾಗಿದ್ದು, ಈ ಮಾದರಿಯಲ್ಲಿ ಅವರು 17 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 64 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 102 ರನ್ ಚಚ್ಚಿದರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಈ ಮೂಲಕ ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧ ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಅವರ ಹಿಂದಿನ ದಾಖಲೆಯನ್ನು ರಾಹುಲ್ ಮುರಿದರು.
ಹಾಗೆಯೇ ಏಕದಿನ ವಿಶ್ವಕಪ್ ಶತಕ ಬಾರಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು.
ರಾಹುಲ್ಗೂ ಮೊದಲು ಇನ್ನೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ದ್ರಾವಿಡ್ 1999 ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ 145 ರನ್‌ಗಳ ಅಮೋಘ ಆಟವಾಡಿ ಈ ಸಾಧನೆ ಮಾಡಿದ್ದರು.
ಇನ್ನು ಇನಿಂಗ್ಸ್‌ನ ಕೊನೆಯ ಓವರ್ನ ಐದನೇ ಎಸೆತದಲ್ಲಿ ರಾಹುಲ್ 102 ರನ್ ಗಳಿಸಿ ಔಟಾದರು. ಏತನ್ಮಧ್ಯೆ, ಶ್ರೇಯಸ್ ಅಯ್ಯರ್ 94 ಎಸೆತಗಳಲ್ಲಿ 128 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾರತ ಕೇವಲ 4 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿದೆ.