ಭಾರತ್ ಆಟ್ಟಾ ಪರಿಚಯಿಸಿದ ಕೇಂದ್ರ ಸರ್ಕಾರ ; ಕೆಜಿ ಗೆ 27.50 ರೂ. ಗೆ ಗ್ರಾಹಕರಿಗೆ ಲಭ್ಯ..!
ಪ್ರತಿದಿನ ಬೆಳಗ್ಗೆ ಆದರೆ ಸಾಕು ಸುದ್ದಿ ಮಾಧ್ಯಮಗಳಲ್ಲಿ ಈ ಪೆಟ್ರೋಲ್, ಡೀಸೆಲ್ (Petrol-Diesel) ಮತ್ತು ಬಂಗಾರ, ಬೆಳ್ಳಿ ಬೆಲೆ (Gold Price) ಇಷ್ಟು ರೂಪಾಯಿ ಏರಿಕೆಯಾಗಿದೆ ಅಂತೆಲ್ಲಾ ಸುದ್ದಿಗಳನ್ನು ನೋಡುತ್ತಿರುತ್ತೇವೆ. ಇದೆಲ್ಲದ ಜೊತೆಗೆ ದಿನಸಿ ಪದಾರ್ಥಗಳಲ್ಲೂ ಸಹ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ನಮ್ಮಲ್ಲಿ ಬೆಲೆ ಏರಿಕೆಯನ್ನು ನೋಡುತ್ತಲೇ ಇರುತ್ತೇವೆ. ಒಟ್ಟಿನಲ್ಲಿ ಹೇಳುವುದಾದರೆ ದೈನಂದಿನ ಅಗತ್ಯತೆಯ ವಸ್ತುಗಳ ಬೆಲೆಗಳು ಈಗ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ದುಡ್ಡಿರುವವರು ಈ ವಸ್ತುಗಳನ್ನು ಸುಲಭವಾಗಿ ಖರೀದಿಸುತ್ತಾರೆ, ಆದರೆ ಮಧ್ಯಮ ಮತ್ತು ಕೂಲಿ ಕೆಲಸ ಮಾಡಿಕೊಂಡು ಬದುಕುವ ಜನರಿಗೆ ಈ ಬೆಲೆ ಏರಿಕೆ ಎಂಬುದು ಗಾಯದ ಮೇಲೆ ಬರೆ ಎಳೆದಂತೆ ಅಂತ ಹೇಳಬಹುದು.
ಕಡಿಮೆ ಬೆಲೆಯ ಗೋಧಿ ಹಿಟ್ಟನ್ನು ಪರಿಚಯಿಸಿದ ಕೇಂದ್ರ ಸರ್ಕಾರ
ಇಂತಹ ಸಂದರ್ಭದಲ್ಲಿ ಅದರಲ್ಲೂ ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿ, ಕೇಂದ್ರ ಸರ್ಕಾರವು ಔಪಚಾರಿಕವಾಗಿ ದೇಶಾದ್ಯಂತ ‘ಭಾರತ್ ಆಟ್ಟಾ’ ಬ್ರ್ಯಾಂಡ್ ಹೆಸರಿನಲ್ಲಿ ಪ್ರತಿ ಕೆಜಿಗೆ 27.50 ರೂಪಾಯಿ ಎಂಬಂತೆ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಮಾರಾಟವನ್ನು ಪ್ರಾರಂಭಿಸಿದೆಯಂತೆ.
ಭಾರತ್ ಆಟ್ಟಾವನ್ನು ಸಹಕಾರಿ ಸಂಸ್ಥೆಗಳಾದ ಎನ್‌ಎಎಫ್ಇಡಿ, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ 800 ಮೊಬೈಲ್ ವ್ಯಾನ್‌ಗಳು ಮತ್ತು ಈ ಮೂರು ಏಜೆನ್ಸಿಗಳ 2,000 ಔಟ್ಲೆಟ್‌ಗಳ ಮೂಲಕ ದೇಶಾದ್ಯಂತ ಹರಡಿರುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಬೆಲೆಗಳಿಂದ ಪರಿಹಾರವನ್ನು ಒದಗಿಸಲು ಮಾರಾಟ ಮಾಡಲಾಗುವುದು.
ಭಾರತ್ ಆಟ್ಟಾ ಬೆಲೆಯನ್ನು ಗುಣಮಟ್ಟ ಮತ್ತು ಸ್ಥಳದ ಆಧಾರದ ಮೇಲೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಕೆಜಿಗೆ 36 ರಿಂದ 70 ರೂಪಾಯಿಗಿಂತ ಕಡಿಮೆ ಇರಿಸಲಾಗಿದೆ.
ಈಗಾಗಲೇ ಫೆಬ್ರುವರಿಯಲ್ಲಿ ಈ ಆಟ್ಟಾವನ್ನ 29.50 ರೂಪಾಯಿಗೆ ಮಾರಾಟ ಮಾಡಲಾಗಿತ್ತಂತೆ..
ಫೆಬ್ರುವರಿಯಲ್ಲಿ, ಕೇಂದ್ರೀಯ ಭಂಡಾರ್‌ಗಳು ಮತ್ತು ಎನ್‌ಎಎಫ್ಇಡಿ, ಎನ್‌ಸಿಸಿಎಫ್ ಮೂಲಕ ಬೆಲೆ ಸ್ಥಿರೀಕರಣ ನಿಧಿ ಯೋಜನೆಯ ಭಾಗವಾಗಿ ಸರ್ಕಾರವು 18,000 ಟನ್‌ಗಳಷ್ಟು ‘ಭಾರತ್ ಆಟ್ಟಾ’ ವನ್ನು ಪ್ರತಿ ಕೆಜಿಗೆ 29.50 ರೂಪಾಯಿಗೆ ಪ್ರಾಯೋಗಿಕವಾಗಿ ಮಾರಾಟ ಮಾಡಿತ್ತು.
ಇಲ್ಲಿಯ ಕರ್ತವ್ಯ ಪಥ್ ಎಂದರೆ ರಾಜಪತ್ ರಸ್ತೆಯಲ್ಲಿ ‘ಭಾರತ್ ಆಟ್ಟಾ’ ದ 100 ಮೊಬೈಲ್ ವ್ಯಾನ್‌ಗಳನ್ನು ಫ್ಲ್ಯಾಗ್ ಆಫ್ ಮಾಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು “ಈಗಾಗಲೇ ನಾವು ಈ ಯೋಜನೆಯ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದೇವೆ, ನಾವು ಔಪಚಾರಿಕವಾಗಿ ಈ ಯೋಜನೆಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಆದ್ದರಿಂದ ದೇಶದ ಎಲ್ಲೆಡೆ ಇದನ್ನು ಈಗ ಪ್ರತಿ ಕೆಜಿಗೆ 27.50 ರೂಪಾಯಿಗೆ ಮಾರಾಟ ಮಾಡಲಾಗುವುದು.
ಇದರಿಂದ ಉತ್ತಮ ಲಾಭವನ್ನು ನಿರೀಕ್ಷಿಸುತ್ತಿದೆಯಂತೆ ಕೇಂದ್ರ ಸರ್ಕಾರ
ದೇಶಾದ್ಯಂತ ಈ ಮೂರು ಏಜೆನ್ಸಿಗಳ 800 ಮೊಬೈಲ್ ವ್ಯಾನ್‌ಗಳು ಮತ್ತು 2,000 ಔಟ್‌ಲೆಟ್ ಗಳ ಮೂಲಕ ಉತ್ಪನ್ನವನ್ನು ಮಾರಾಟ ಮಾಡುವುದರಿಂದ ಸರ್ಕಾರವು ಉತ್ತಮ ಲಾಭವನ್ನು ನಿರೀಕ್ಷಿಸುತ್ತಿದೆ ಎಂದು ಸಚಿವರು ಹೇಳಿದರು.
ಎನ್‌ಎಎಫ್ಇಡಿ, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್‌ಗಳಿಗೆ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) 2.5 ಲಕ್ಷ ಟನ್ ಗೋಧಿಯನ್ನು ಕೆಜಿಗೆ 21.50 ರೂಪಾಯಿಗೆ ಪಡೆದಿದೆ. ಮೂರು ಏಜೆನ್ಸಿಗಳು ಅದನ್ನು ಗೋಧಿ ಹಿಟ್ಟಾಗಿ ಪರಿವರ್ತಿಸಿ ‘ಭಾರತ್ ಆಟ್ಟಾ’ ಬ್ರ್ಯಾಂಡ್‌ನಲ್ಲಿ ಕೆಜಿಗೆ 27.50 ರೂಪಾಯಿಗೆ ಮಾರಾಟ ಮಾಡುತ್ತವೆ.
ಗೋಧಿ ಹಂಚಿಕೆಯ ವಿವರವನ್ನು ನೀಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ “ಒಟ್ಟು 2.5 ಲಕ್ಷ ಟನ್ ಗೋಧಿಯಲ್ಲಿ ತಲಾ ಒಂದು ಲಕ್ಷ ಟನ್‌ಗಳನ್ನು ಎನ್‌ಎಎಫ್ಇಡಿ, ಎನ್‌ಸಿಸಿಎಫ್ ಮತ್ತು 50,000 ಟನ್‌ಗಳನ್ನು ಕೇಂದ್ರೀಯ ಭಂಡಾರ್‌ಗೆ ನೀಡಲಾಗುವುದು ಎಂದು ಹೇಳಿದರು.