ಮೂಡಿಗೆರೆ : ಪ್ರಪಾತಕ್ಕೆ ಉರುಳಿದ ಬಸ್ ; ಮಹಿಳೆ ಮೃತ್ಯು - 5 ಮಂದಿ ಗಂಭೀರ!
ಚಿಕ್ಕಮಗಳೂರು : ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ – ಕಸ್ಕೇಬೈಲು ಕ್ರಾಸ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.
ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ(45) ಮೃತ ದುರ್ದೈವಿಯಾಗಿದ್ದಾರೆ. ಬೆಂಗಳೂರಿನಿಂದ ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಪ್ರವಾಸ ಹೊರಟಿದ್ದ ಈ ಬಸ್ಸಿನಲ್ಲಿ 48ಕ್ಕೂ ಹೆಚ್ಚು ಪ್ರವಾಸಿಗರಿದ್ದರು. ಇಂದು ಬೆಳಗಿನ ಜಾವ 4:45ರ ವೇಳೆ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಚೀಕನಹಳ್ಳಿ – ಕಸ್ಕೇಬೈಲು ಕ್ರಾಸ್ ಬಳಿ ಬಸ್ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದರೂ ನಿದ್ದೆಯ ಮಂಪರಿನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಗಾಯಾಳುಗಳನ್ನು ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಂಗಳೂರು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನೇತ್ರಾವತಿ ನದಿ ಒಡಲನ್ನು ಬರಿದು ಮಾಡ ಹೊರಟ ಧೂರ್ತರು..!
ಮಂಗಳೂರು : ಕರಾವಳಿಯ ಜೀವನದಿ ನೇತ್ರಾವತಿ ಯನ್ನು ನಿರ್ನಾಮ ಮಾಡಲು ಮಂಗಳೂರಿನ ಕೆಲವು ಸ್ಥಾಪಿತ ಹಿತಾಸಕ್ತಿಗಳು ಪಣತೊಟ್ಟಂತೆ ಕಾಣುತ್ತಿದ್ದು, ನೇತ್ರಾವತಿಯ ಒಡಲನ್ನು ತ್ಯಾಜ್ಯ, ಕಲ್ಲು ಮಣ್ಣುಗಳಿಂದ ತುಂಬಿಸುವ ಕಾರ್ಯ ನಗರದ ಬೋಳಾರಿನಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.
ಅಭಿವೃದ್ದಿ ಮತ್ತು ಸುಂದರೀಕರಣದ ನೆಪದಲ್ಲಿ ಮಾಡುವ ಈ ಯೋಜನೆಗೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈಗಾಗಲೇ ಸುರಿದ ತ್ಯಾಜ್ಯ,ಕಲ್ಲು ಮಣ್ಣನ್ನು ತೆರವು ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (MSCL) ನಗರದ ಬೋಳಾರದ ನೇತ್ರಾವತಿ ನದಿ ತೀರದಲ್ಲಿ ವಾಟರ್‌ಫ್ರಂಟ್ ವಾಯುವಿಹಾರ ಯೋಜನೆ ಕಾರ್ಯಗತಗೊಳಿಸುತ್ತಿದ್ದುಬಾಹ್ಯ ಸ್ಥಳಗಳಿಂದ ಮಣ್ಣನ್ನು ತಂದು ಸುರಿಯುವ ಕಾರ್ಯ ಮಾಡುತ್ತಿದೆ , ಇದು ಸಾಲದಕ್ಕೆ ಎಮ್ಮೆಕೆರೆ ಈಜುಕೊಳದ ಕಾಂಪೌಂಡ್ ಅವಶೇಷಗಳನ್ನು ನೇತ್ರಾವತಿಯ ಒಡಲಿಗೆ ಸುರಿಯುವ ಕಾರ್ಯ ನಡೆಸುತ್ತಿದೆ.
ನದಿಯ ಒಡಲು ಬರಿದಾಗಿ ಜಲಚರ ಜೀವರಾಶಿಗೂ ಕಂಟಕವಾಗಲಿದೆ, ಜೊತೆಗೆ ಗಂಭೀರ ಪರಿಸರ ಮಾಲಿನ್ಯ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ದಶಕಗಳ ಹಿಂದೆ ಇದ್ದ ಬೃಹತ್ ಮಳೆ ನೀರು ಹರಿವಿನ ಚರಂಡಿಗಳನ್ನು ಈ ಮಣ್ಣಿನ ಅವಶೇಷಗಳಿಂದ ತುಂಬಿಸಿ ನೆಲಸಮಗೊಳಿಸಲಾಗುತ್ತಿದ್ದು, ಈ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಅವಶೇಷಗಳನ್ನು ನದಿಯ ಒಡಲಿಗೆ ತುಂಬಿಸುವುದು ಕೂಡ CRZ ನ ಸ್ಪಷ್ಟ ಉಲ್ಲಂಘನೆಯಾಗಿದೆ. ಸ್ಮಾರ್ಟ್ ಸಿಟಿ MSCL ನ ಇಂತಹ ಚಟುವಟಿಕೆಗಳು ಭವಿಷ್ಯದಲ್ಲಿ ಮಂಗಳೂರಿನ ಸೂಕ್ಷ್ಮಾ ಪರಿಸರದ ಮೇಲೆ ಗಂಭಿರ ಪರಿಣಾಮಗಳನ್ನು ಬೀರಬಹುದು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟಡ್ 1 ಕಿ.ಮೀ ವರೆಗೂ ನೇತ್ರಾವತಿ ಜಲಾಭಿಮುಖವಾಗಿ ಈ ಯೋಜನೆಯನ್ನು ವಿಸ್ತರಿಸುವ ಮೂಲಕ CRZ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಜಿಲ್ಲಾಡಳಿತ, ಸಂಬಂಧ ಪಟ್ಟ ಅಧಿಕಾರಿಗಳು ಈ ಸ್ಥಳವನ್ನು ಪರಿಶೀಲಿಸಿ ತುರ್ತು ಕ್ರಮ ಕೈಕೊಳ್ಳಬೇಕಾದ ಅಗತ್ಯವಿದೆ ಎಂದು ಪರಿಸವಾದಿಗಳು ಆಗ್ರಹಿಸಿದ್ದಾರೆ.