ಬನಾರಸ್ ಹಿಂದೂ ವಿವಿ ಆವರಣದಲ್ಲಿ ಬೈಕ್ ನಲ್ಲಿ ಬಂದು ವಿದ್ಯಾರ್ಥಿನಿಗೆ ಚುಂಬಿಸಿ ಬಟ್ಟೆ ಹರಿದು ವಿಡಿಯೋ ಚಿತ್ರೀಕರಿಸಿದ ದುಷ್ಕರ್ಮಿಗಳು !
ಲಖನೌ: ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಆವರಣದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿನಿಯೊಬ್ಬಳನ್ನು ಚುಂಬಿಸಿ, ಆಕೆಯ ಬಟ್ಟೆ ಹರಿದ ಆಘಾತಕಾರಿ ಘಟನೆ ನಡೆದಿದ್ದು, ಐಐಟಿ- ಬಿಎಚ್‌ಯುದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು, ವಿದ್ಯಾರ್ಥಿನಿ ತಂಗಿದ್ದ ಹಾಸ್ಟೆಲ್ ಸಮೀಪದಲ್ಲಿ ಈ ಹೇಯ ಕೃತ್ಯ ಎಸಗಿದ್ದಾರೆ. ಅಲ್ಲದೆ, ಅದರ ವಿಡಿಯೋವನ್ನು ಕೂಡ ಚಿತ್ರೀಕರಿಸಿದ್ದಾರೆ.
ಇದರಲ್ಲಿ ವಿವಿಗೆ ಸಂಬಂಧಿಸದ ಹೊರಗಿನ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆವರಣದ ಒಳಗೆ ಹೊರಗಿನ ವ್ಯಕ್ತಿಗಳು ಪ್ರವೇಶಿಸದಂತೆ ನಿಷೇಧ ವಿಧಿಸಲು ಅವರು ಆಗ್ರಹಿಸಿದ್ದಾರೆ. ಜತೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆವರಣದಿಂದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು (ಐಐಟಿ) ಪ್ರತ್ಯೇಕಿಸುವ ಗೋಡೆಯನ್ನು ನಿರ್ಮಿಸಲು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಸಂಸ್ಥೆಯು, ಐಐಟಿ ಆವರಣವನ್ನು ಸಂಪೂರ್ಣವಾಗಿ ಅನ್ಯರ ಪ್ರವೇಶದಿಂದ ಮುಚ್ಚುವ ಪ್ರಸ್ತಾವವನ್ನು ಶಿಕ್ಷಣ ಸಚಿವಾಲಯದ ಮುಂದೆ ಇರಿಸುವುದಾಗಿ ತಿಳಿಸಿದೆ.
“ನಿರ್ಬಂಧಿತ ಪ್ರವೇಶದೊಂದಿಗೆ ಮುಚ್ಚಿದ ಆವರಣದ ನಿರ್ಮಾಣಕ್ಕಾಗಿ ಶಿಕ್ಷಣ ಸಚಿವಾಲಯ ಮತ್ತು ವಿವಿ ಆಡಳಿತದ ಜತೆ ಸಂಸ್ಥೆಯು ಮಾತುಕತೆ ನಡೆಸಲಿದೆ” ಎಂದು ಬಿಎಚ್‌ಯು ರಿಜಿಸ್ಟ್ರಾರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆವರಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಶೀಘ್ರದಲ್ಲಿಯೇ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಕುಲಸಚಿವರು ಹೇಳಿದ್ದಾರೆ.
ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯಾರ್ಥಿಗಳ ಓಡಾಟವನ್ನು ಕೂಡ ನಿರ್ಬಂಧಿಸಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ.
ಬುಧವಾರ ರಾತ್ರಿ ಸ್ನೇಹಿತೆ ಜತೆ ಹಾಸ್ಟೆಲ್‌ನಿಂದ ಹೊರಗೆ ಬಂದಿದ್ದಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿರುವ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಕರ್ಮನ್ ಬಾಬಾ ದೇವಸ್ಥಾನದ ಸಮೀಪ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಆಕೆಯನ್ನು ಸ್ನೇಹಿತೆಯಿಂದ ದೂರ ಮಾಡಿ, ಮೂಲೆಯೊಂದಕ್ಕೆ ಎಳೆದುಕೊಂಡು ಹೋಗಿ ಬಲವಂತವಾಗಿ ಚುಂಬಿಸಿದ್ದಾರೆ. ಬಳಿಕ ಆಕೆಯ ಬಟ್ಟೆಗಳನ್ನು ಹರಿದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಕೆಯ ಬಟ್ಟೆಗಳನ್ನು ಹರಿದ ದುಷ್ಕರ್ಮಿಗಳು, ಆಕೆಯ ವಿಡಿಯೋ ಮಾಡಿದ್ದಲ್ಲದೆ, ಫೋಟೋಗಳನ್ನು ಸಹ ತೆಗೆದಿದ್ದಾರೆ. ಆಕೆಯ ಫೋನ್ ನಂಬರ್ ಪಡೆದುಕೊಂಡು, 15 ನಿಮಿಷಗಳ ಬಳಿಕ ಅಲ್ಲಿಂದ ಹೋಗಲು ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ತಿಳಿಸಿರುವ ಪೊಲೀಸರು, ಆವರಣದಲ್ಲಿ ಸುರಕ್ಷತೆ ಕಾಪಾಡಲು ವಿವಿ ಆಡಳಿತದ ಜತೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.