ರಸ್ತೆ ದಾಟುತ್ತಿದ್ದಾಗ ಲಾರಿ ಡಿಕ್ಕಿ ; ಚಕ್ರಕ್ಕೆ ಸಿಲುಕಿ ಇಬ್ಬರು ಮಹಿಳೆಯರ ದೇಹ ಛಿದ್ರ ಛಿದ್ರ!
ಆನೇಕಲ್: ಯಮ ಸ್ವರೂಪಿಯಾಗಿ ಬಂದ ಲಾರಿಯು ರಸ್ತೆ ದಾಟುತ್ತಿದ್ದ ಮಹಿಳೆಯರಿಗೆ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಮಹಿಳೆಯರ ಮೇಲೆ ಲಾರಿ ಹರಿದಿದೆ. ಪರಿಣಾಮ ಎರಡು ದೇಹಗಳು ಛಿದ್ರ ಛಿದ್ರಕೊಂಡ ಘಟನೆ ಬೆಂಗಳೂರಿನ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗವೇ ಈ ಅಪಘಾತ ನಡೆದಿದೆ. ಇಬ್ಬರು ಮಹಿಳೆಯರ ಗುರುತು ಪತ್ತೆಯಾಗಿಲ್ಲ. ವೈಟ್ ಫೀಲ್ಡ್‌ನಿಂದ ಬಂದಿದ್ದಾರೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಆಸ್ಪತ್ರೆಗೆ ಹೋಗಲು ರಸ್ತೆ ದಾಟುವಾಗ ಈ ದುರ್ಘಟನೆ ನಡೆದಿದೆ.
ಬಳಕೆಯಾಗದ ಸ್ಕೈವಾಕ್
ಸ್ಕೈವಾಕ್ ಇದ್ದರೂ ಬಹುತೇಕರು ಬಳಸದೆ ಇರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ. ಬೊಮ್ಮಸಂದ್ರ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಸ್ಕೈವಾಕ್ ಬಿಟ್ಟು ರಸ್ತೆ ದಾಟುತ್ತಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ನಾರಾಯಣ ಹೃದಯಾಲಯ ಮತ್ತು ಬಿಟಿಎಲ್ ಕಾಲೇಜಿದೆ. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ದಾಟುತ್ತಾರೆ.
ಹೀಗೆ ಸ್ಕೈ ವಾಕ್ ಇದ್ದರೂ ಕೂಡ ರಸ್ತೆ ಮೂಲಕವೇ ದಾಟಲು ಹೋಗಿ ಮಹಿಳೆಯರು ಮೃತಪಟ್ಟಿದ್ದಾರೆ. ಲಾರಿ ಚಕ್ರವು ಮಹಿಳೆಯರ ಹೊಟ್ಟೆ ಮೇಲೆ ಹರಿದು ದೇಹವೆಲ್ಲವೂ ರಸ್ತೆಯಲ್ಲಿ ಛಿದ್ರಗೊಂಡಿತ್ತು. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಯುವಕ ಸಾವು, ಯುವತಿ ಗಂಭೀರ
ದೊಡ್ಡಬಳ್ಳಾಪುರದ ಕತ್ತಿಹೊಸಹಳ್ಳಿ ಬಳಿ ದ್ವಿಚಕ್ರ ವಾಹನ ರಸ್ತೆ ಬದಿಯ ಡಿವೈರ್‌ಗೆ ಗುದ್ದಿದ ಪರಿಣಾಮ ಯುವಕನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತುಮಕೂರಿನಿಂದ ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಬರುವ ವೇಳೆ ಈ ದುರ್ಘಟನೆ ನಡೆದಿದೆ. ರಸ್ತೆ ಬದಿಯ ಡಿವೈಡರ್‌ಗೆ ಗುದ್ದಿದ ಪರಿಣಾಮ ಎಗರಿ ಪಕ್ಕದ ರಸ್ತೆಗೆ ಯುವಕ ಬಿದ್ದಿದ್ದಾನೆ. ಗಂಭೀತ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹಿಂಬದಿ ಕುಳಿತಿದ್ದ ಯುವತಿಗೆ ತೀವ್ರ ಗಾಯವಾಗಿದ್ದು, ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪೊಲೀಸರು ಮೃತನ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇಬ್ಬರು ಸವಾರರು ತುಮಕೂರು ಮೂಲದವರು ಎನ್ನಲಾಗಿದೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.