ಅಮೆರಿಕದಲ್ಲಿ ಅಪರಿಚಿತನಿಂದ ಭೀಕರ ಗುಂಡಿನ ದಾಳಿ; 22 ಮಂದಿ ಸಾವು!
ವಾಷಿಂಗ್ಟನ್ ಡಿಸಿ: ಅಮೆರಿಕದ ಮೈನ್ ಪ್ರದೇಶದ ಲೆವಿಸ್ಟನ್ ಎಂಬಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ (mass shooting, Gun Violence) ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ, ಸುಮಾರು 60 ಜನರು ಗಾಯಗೊಂಡಿದ್ದಾರೆ.
ಈ ಘಟನೆ ಬುಧವಾರ ತಡರಾತ್ರಿ (ಯುಎಸ್ ಸ್ಥಳೀಯ ಕಾಲಮಾನ) ನಡೆದಿದೆ. ಆರೋಪಿ ಇನ್ನೂ ಸೆರೆಸಿಕ್ಕಿಲ್ಲ. ಆಂಡ್ರೊಸ್ಕೊಗಿನ್ ಕೌಂಟಿ ಶೆರೀಫ್ ಕಚೇರಿಯು ಶಂಕಿತ ದಾಳಿಕೋರನ ಎರಡು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ. ಗುಂಡಿನ ದಾಳಿಯ ಸ್ಥಳದಲ್ಲಿ ಇದನ್ನು ತೆಗೆಯಲಾಗಿದ್ದು, ರೈಫಲ್ ಹಿಡಿದಿರುವುದು ಕಂಡುಬಂದಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.
CNN ಮತ್ತು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಾರ ಮೈನ್‌ನಲ್ಲಿ (maine shooting) ಸಾವಿನ ಸಂಖ್ಯೆ 16. ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಒಂದು ಬೌಲಿಂಗ್ ಅಲ್ಲೇ ಮತ್ತು ಇನ್ನೊಂದು ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಅಧಿಕಾರಿಗಳು ಚಿತ್ರದಲ್ಲಿರುವ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯ ಕೇಳಿದ್ದಾರೆ. ಲೆವಿಸ್ಟನ್‌ನಲ್ಲಿರುವ ಸೆಂಟ್ರಲ್ ಮೈನೆ ವೈದ್ಯಕೀಯ ಕೇಂದ್ರ ದಾಳಿಯಲ್ಲಿ ಗಾಯಗೊಂಡವರನ್ನು ಕರೆದೊಯ್ಯಲು ಪ್ರದೇಶದ ಆಸ್ಪತ್ರೆಗಳೊಂದಿಗೆ ಸಂವಹನ ನಡೆಸುತ್ತಿದೆ.
ಸ್ಟೇಟ್ ಪೊಲೀಸರು ಶೂಟರ್‌ನ ಪತ್ತೆಗೆ ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಸಾರ್ವಜನಿಕರಿಗೆ ಸಕ್ರಿಯ ಶೂಟರ್ ಪರಿಸ್ಥಿತಿಯ ಮಾಹಿತಿ ನೀಡಿ ನಿವಾಸಿಗಳು ಮನೆಯೊಳಗೆ ಇರುವಂತೆ ಸೂಚಿಸಿದ್ದಾರೆ. ಲೆವಿಸ್ಟನ್, ಮೈನೆ ಸ್ಟೇಟ್‌ನ ಆಂಡ್ರೊಸ್ಕೋಗ್ಗಿನ್ ಕೌಂಟಿಯ ಭಾಗವಾಗಿದ್ದು, ಎರಡನೇ ಅತಿದೊಡ್ಡ ನಗರವಾಗಿದೆ. ಅತಿ ದೊಡ್ಡ ನಗರವಾದ ಪೋರ್ಟ್‌ಲ್ಯಾಂಡ್‌ನ ಉತ್ತರಕ್ಕೆ ಸುಮಾರು 35 ಮೈಲು ದೂರದಲ್ಲಿದೆ. ಘಟನೆಯ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಅವರಿಗೂ ಮಾಹಿತಿ ನೀಡಲಾಗಿದೆ.
ಬಂದೂಕು ಸಂಸ್ಕೃತಿ (gun culture) ವ್ಯಾಪಕವಾಗಿರುವ ಯುನೈಟೆಡ್ ಸ್ಟೇಟ್ಸ್ ಈ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳನ್ನು ದಾಖಲಿಸಿದೆ. ಗನ್ ವಯಲೆನ್ಸ್ ಆರ್ಕೈವ್ ಎಂಬ ಸರ್ಕಾರೇತರ ಸಂಸ್ಥೆಯು ಸಾಮೂಹಿಕ ಗುಂಡಿನ ದಾಳಿ ಎಂದರೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗಾಯಗೊಂಡ ಅಥವಾ ಸಾವು ಸಂಭವಿಸಿದ ಪ್ರಕರಣಗಳು ಎಂದು ವ್ಯಾಖ್ಯಾನಿಸುತ್ತದೆ.
ಇಸ್ರೇಲ್ ದಾಳಿಗೆ ಗಾಜಾ ನಗರ ದಿವಾಳಿ; ಒಂದೇ ರಾತ್ರಿ 700 ಜನ ಸಾವು
ಜೆರುಸಲೇಂ: ಅಕ್ಟೋಬರ್ 7ರಂದು ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ನಡೆಸಿದ ಹಮಾಸ್ ಉಗ್ರರನ್ನು ನಿರ್ನಾಮ (Israel Palestine War:) ಮಾಡಲು ಪಣತೊಟ್ಟಿರುವ ಇಸ್ರೇಲ್, ಮಂಗಳವಾರ ತಡರಾತ್ರಿ (ಅಕ್ಟೋಬರ್ 24) ಗಾಜಾ ನಗರದ ಮೇಲೆ ರಾಕೆಟ್ ದಾಳಿ ನಡೆಸಿದೆ. ಇಸ್ರೇಲ್ ನಡೆಸಿದ ದಾಳಿಗೆ 700ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಹಮಾಸ್ ಉಗ್ರರೇ (Hamas Terrorists) ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಗಾಜಾ ನಗರದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದಂತಾಗಿದೆ ಎಂದು ತಿಳಿದುಬಂದಿದೆ.
ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಮರ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ. ಹಮಾಸ್‌ನ 400 ಪ್ರಮುಖ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ರಾತ್ರೋರಾತ್ರಿ ಗಾಜಾ ನಗರದ ಮೇಲೆ ದಾಳಿ ನಡೆಸಿದೆ. ಆದರೆ, ದಾಳಿಯಲ್ಲಿ 700ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಮಾಸ್ ಉಗ್ರ ಸಂಘಟನೆ ತಿಳಿಸಿದೆ. ಇಸ್ರೇಲ್ ಸೇನೆಯ ದಾಳಿಯಲ್ಲ ಸಾವಿರಾರು ಜನ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲು ಸಹ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
7 ಸಾವಿರ ದಾಟಿದ ಸಾವಿನ ಸಂಖ್ಯೆ
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.
ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಇಷ್ಟಾದರೂ ಕೆಲವು ಉಗ್ರರು ರಕ್ಕಸ ಕೃತ್ಯಗಳ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇನ್ನು ಮತ್ತೊಂದೆಡೆ, ಬೆಂಜಮಿನ್ ನೆತನ್ಯಾಹು ಅವರು ಐಡಿಎಫ್ ಮುಖ್ಯಸ್ಥರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ, “ಹಮಾಸ್ ಉಗ್ರರರನ್ನು ನಾವು ನಿರ್ನಾಮ ಮಾಡದೆ ಬಿಡುವುದಿಲ್ಲ” ಎಂದು ಐಡಿಎಫ್ ಮುಖ್ಯಸ್ಥ ಹೇಳಿದ್ದಾರೆ.