ವಾರ್ನರ್-ಮಾರ್ಷ್ ಸ್ಫೋಟಕ ಬ್ಯಾಟಿಂಗ್ ; ಪಾಕಿಸ್ಥಾನಕ್ಕೆ 2ನೇ ಸೋಲಿನ ಆಘಾತ!
ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ 62 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 368ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ 45.3 ಓವರ್ ನಲ್ಲಿ 305 ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ 62 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಪಾಕಿಸ್ತಾನ ಪರ ಆರಂಭಿಕರಾದ ಅಬ್ದುಲ್ಲಾ ಶಫೀಕ್ (64 ರನ್), ಇಮಾಮ್ ಉಲ್ ಹಕ್ (70 ರನ್) ಮತ್ತು ಮಹಮದ್ ರಿಜ್ವಾನ್ (46 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಆದರೆ ನಾಯಕ ಬಾಬರ್ ಆಜಂ ಸೇರಿದಂತೆ ಪಾಕ್ ತಂಡದ ಉಳಿದ ಬ್ಯಾಟರ್ ಗಳಿಂದ ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕಾರ್ ಅಹ್ಮದ್ (26 ರನ್) ಮತ್ತು ಸೌದ್ ಶಕೀಲ್ (30 ರನ್) ಬಂದಷ್ಟೇ ವೇಗವಾಗಿ ಬ್ಯಾಟ್ ಬೀಸಿ ಪೆವಿಲಿಯನ್ ಸೇರಿಕೊಂಡರು.
ಕೆಳ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್ ಕೂಡ ಆಸ್ಟ್ರೇಲಿಯನ್ ಬೌಲರ್ ಗಳಿಗೆ ಸವಾಲೆನಿಸಲೇ ಇಲ್ಲ. ಪರಿಣಾಮ ಪಾಕಿಸ್ತಾನ ತಂಡ 45.3 ಓವರ್ ನಲ್ಲಿ 305 ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ 62 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ಆಡಂ ಜಂಪಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮಾರ್ಕಸ್ ಸ್ಟಾಯ್ನಿಸ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು. ಅಂತೆಯೇ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್ ವುಡ್ ತಲಾ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.