ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

ರಾಯಚೂರು: ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಜಮೀನುಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ಸಾತ್ ಮೈಲ್ ಬಳಿ ರೈತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಿಮೀಗಟ್ಟಲೇ ವಾಹನಗಳು ಸಿಕ್ಕಿಕೊಂಡು ಜನ ಪರದಾಡುವಂತಾಗಿದೆ. ಬೆಳಗ್ಗೆಯಿಂದ ರಸ್ತೆ ಮೇಲೆ ಧರಣಿ ನಡೆಸಿದ ರೈತರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಬಸ್ ಚಾಲಕರು, ವಾಹನಗಳ ಮಾಲೀಕರು ನೆಲಹಾಳ ಮಾರ್ಗವಾಗಿ ಸಂಚರಿಸಲು ಯತ್ನಿಸಿದ್ದು ಅಲ್ಲಿಯೂ ವಾಹನಗಳಿಗೆ ಅಡ್ಡಗಟ್ಟಲಾಗಿದೆ. ಟಯರ್ ಗಳಿಗೆ ಬೆಂಕಿ ಹಚ್ಚಿ ವಾಹನಗಳು ಓಡಾಡದಂತೆ ತಡೆದರು. ಬದಲಿ ಮಾರ್ಗದಿಂದ ಹೋಗಲು ಯತ್ನಿಸಿದರೂ ರೈತರು ಬಿಡಲಿಲ್ಲ.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ರೈತರು, ಟಿಎಲ್ ಬಿಸಿ ಕೊನೆ ಭಾಗಕ್ಕೆ ನೀರು ಬಾರದೆ ಬೆಳೆಯೆಲ್ಲ ಹಾಳಾಗುತ್ತಿದೆ. ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಲಿದ್ದು, ಇನ್ನೂ ಇದೇ ಪರಿಸ್ಥಿತಿ ಮುಂದುವರಿದರೆ ಶೋಚನೀಯವಾಗಲಿದೆ. ಕೂಡಲೇ ಕೊನೆ ಭಾಗಕ್ಕೆ ನೀರು ಹರಿಸಲು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು.
ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಸುಮ್ಮನೆ ಬಿಡಲ್ಲ: ಎಚ್ ಡಿಕೆ ಕಟು ಟೀಕೆ
ಬೆಂಗಳೂರು: ರಾಮನಗರ ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಜಧಾನಿಯ ಕಸ ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು; ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ‘ಪರ್ಸಂಟೇಜ್ ಪಟಾಲಂ’ ಈಗ ಕಸಕ್ಕೂ ಬಾಯಿ ಹಾಕಿದೆ! ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ! ಅದರ ಒಳಗುಟ್ಟು ರಟ್ಟಾಗಿದೆ! ‘ಬ್ರ್ಯಾಂಡ್’ ಹೆಸರಿನಲ್ಲಿ ಕೊಳ್ಳೆ ಹೊಡೆಯಲು, ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್ʼಗಳನ್ನು ಸೃಷ್ಟಿ ಮಾಡುತ್ತಿರುವುದು ದಿಟ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.