ಲುಲು ಮಾಲ್ನಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಅಪಮಾನ ; ಸುಳ್ಳು ಸುದ್ದಿ ಹರಡಿಸಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಮೇಲೆ ಕೇಸು!
ತುಮಕೂರು: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿಯ ಮಾಧ್ಯಮ ವಿಭಾಗದ ಕಾರ್ಯಕರ್ತೆ ಶಕುಂತಲಾ ನಟರಾಜ್ (Shakuntala Nataraj) ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಕೊಚ್ಚಿಯ ಲುಲು ಮಾಲ್ನಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಅಪಮಾನ (Lulu mall Flag issue) ಮಾಡಲಾಗಿದೆ ಎಂದು ಟ್ವಿಟರ್ ನಲ್ಲಿ ಫೇಕ್ ಪೊಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ತುಮಕೂರಿನ (Tumkur News) ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಲುಲು ಶಾಪಿಂಗ್ ಮಾಲ್ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ಎಂದು ಫೋಟೊ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದರು ಶಕುಂತಲಾ ನಟರಾಜ್. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್ ಚೆಕ್ ವೇಳೆ ಬಯಲಾಗಿದೆ. ಹೀಗಾಗಿ ಪೊಲೀಸರು ಶಕುಂತಲಾ ನಟರಾಜ್ ಮೇಲೆ ಕೇಸು ದಾಖಲಿಸಿದ್ದಾರೆ.
ʻಭಾರತದ ಬಾವುಟಕ್ಕಿಂತ ಬೇರೆ ಯಾವುದೇ ದೇಶದ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ನವರಿಗೆ.? @ಡಿ.ಕೆ. ಶಿವಕುಮಾರ್ #ಬಾಯ್ಕಾಟ್ ಲುಲುಮಾಲ್’ ಎಂದು ಪೋಸ್ಟ್ ಹಂಚಿಕೊಂಡಿದ್ದರು ಶಕುಂತಲಾ. ಮೊದಲನೆಯದಾಗಿ ಇದು ಫೇಕ್ ಫೋಟೊ ಆಗಿತ್ತು. ಅಲ್ಲಿ ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಪ್ರತಿನಿಧಿಸುವ ಎಲ್ಲ ತಂಡಗಳ ದೇಶಗಳ ಬಾವುಟವನ್ನು ಒಂದೇ ಗಾತ್ರದಲ್ಲಿ ಹಾಕಲಾಗಿತ್ತು. ಆದರೆ, ಅವುಗಳನ್ನು ಬೇರೆ ಬೇರೆ ಕೋನದಲ್ಲಿ ಫೋಟೊ ತೆಗೆದು ಭಾರತದ ಧ್ವಜ ಪಾಕಿಸ್ತಾನಕ್ಕಿಂತ ಸಣ್ಣದಾಗಿದೆ ಎಂಬಂತೆ ಬಿಂಬಿಸಲಾಗಿದೆ. ಇಲ್ಲವೇ ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಾಮಾಜಿಕವಾಗಿ ಜನರಲ್ಲಿ ಆಕ್ರೋಶ ಮೂಡಿಸುವ, ಕೆರಳಿಸುವ ಪ್ರಯತ್ನ ಮಾಡಲಾಗಿದೆ ಎನ್ನುವುದು ದೂರಿನ ಸಾರ. ಅದರ ಜತೆಗೆ ಲುಲು ಮಾಲ್ಗೂ ಡಿ.ಕೆ. ಶಿವಕುಮಾರ್ ಅವರಿಗೂ ಸಂಬಂಧ ಕಲ್ಪಿಸಲಾಗಿದೆ. ಕೊಚ್ಚಿಯ ಚಿತ್ರವನ್ನು ಬಳಸಿಕೊಂಡು ಬೆಂಗಳೂರಿನಲ್ಲೂ ಬೆಂಕಿ ಹಚ್ಚುವ ಪ್ರಯತ್ನ ಇದೆಂದು ಆರೋಪಿಸಲಾಗಿದೆ.
ಹೀಗಾಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದಡಿ ಐಪಿಸಿ 153 (ಬಿ) ಅಡಿಯಲ್ಲಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಬರುವಂತೆ ಶಕುಂತಲಾ ಅವರಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ವಿಡಿಯೊ ಚಿತ್ರೀಕರಣ ಸುದ್ದಿಯಲ್ಲಿದ್ದಾಗ ಶಕುಂತಲಾ ನಟರಾಜ್ ಅವರು ಸಿದ್ದರಾಮಯ್ಯ ಕುಟುಂಬವನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿದ್ದರು. ಈ ಪ್ರಕರಣದಲ್ಲಿ ಶಕುಂತಲಾ ನಟರಾಜ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು.