Gold Rate: ಗಗನಕ್ಕೇರುತ್ತಿರುವ ಚಿನ್ನದ ಬೆಲೆ ; ಎಷ್ಟಾಗಲಿದೆ ಚಿನ್ನದ ಬೆಲೆ...!
ಬೆಂಗಳೂರು, ಅಕ್ಟೋಬರ್ 12: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಈ ಯುದ್ಧ ಆರಂಭವಾದಾಗಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಭಾರತದಲ್ಲಿ ಸರಣಿ ಹಬ್ಬಗಳು ಆರಂಭವಾಗುವುದಕ್ಕೂ ಮುಂಚೆ ಸಂಭವಿಸುತ್ತಿರುವ ಬೆಳವಣಿಗೆಗಳು ಗ್ರಾಹಕರರನ್ನು ಚಿಂತೆಗೀಡು ಮಾಡಿದೆ.
ಅಕ್ಟೋಬರ್‌ನಲ್ಲಿ ದಸರಾ ಮತ್ತು ನವೆಂಬರ್‌ನಲ್ಲಿ ದೀಪಾವಳಿ ಹಬ್ಬಗಳು ಬರುತ್ತದೆ. ಈ ತಿಂಗಳುಗಳನ್ನು ಮಂಗಳಕರವೆಂದು ಪರಿಗಣಿಸುವುದರಿಂದ ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ.
ಚಿನ್ನದ ಬೆಲೆ ಏರಿಕೆ ಸಾಧ್ಯತೆ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆ ರಾಷ್ಟ್ರೀಯ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಸಿಎ ಸುರೇಂದ್ರ ಮೆಹ್ತಾ, ‘ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಚಿನ್ನದ ಬೆಲೆಗಳು ಹೆಚ್ಚುತ್ತಿವೆ’ ಎಂದು ಹೇಳಿದ್ದಾರೆ.
ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಇಳಿಮುಖವಾಗಿದ್ದ ಚಿನ್ನದ ಬೆಲೆಗಳು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಏರಿಕೆಯಾಗಲು ಪ್ರಾರಂಭಿಸಿವೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಮಾತನಾಡಿರುವ ಕರ್ನಾಟಕ ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿಎ ಶರವಣ, ‘ಯಾವುದೇ ಯುದ್ಧವು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ವಾರಗಳವರೆಗೆ ಇರುತ್ತದೆ ಎಂಬುದಾಗಿ ನಾವು ನಿರೀಕ್ಷಿಸುತ್ತಿದ್ದೇವೆ. ಇದರ ಹೊರತಾಗಿ, ಯುಎಸ್‌ನಲ್ಲಿನ ಬಡ್ಡಿದರ ಹೆಚ್ಚಳವು ಹಳದಿ ಲೋಹದ ಬೆಲೆಗಳನ್ನು ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.
ಭೌಗೋಳಿಕ ರಾಜಕೀಯ ತೊಂದರೆ ಅಥವಾ ವ್ಯಾಪಾರ ಉದ್ವಿಗ್ನತೆ ಉಂಟಾದಾಗ, ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಗಳು ಕಡಿಮೆಯಾಗಿರುತ್ತವೆ. ಭಯದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ಆರ್ಥಿಕ ಏರುಪೇರುಗಳ ನಡುವೆಯೂ ಬೆಲೆ ಸ್ಥಿರವಾಗಿ ಉಳಿಯುವ ಏಕೈಕ ಸರಕು ಚಿನ್ನವಾಗಿದೆ. ಹೆಚ್ಚಿನ ಹೂಡಿಕೆದಾರರು ಹಳದಿ ಲೋಹದಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆ.ಎಸ್.ಕೇಶವ್ ಮಾತನಾಡಿ, ‘ಯುದ್ಧಗಳು ಅಥವಾ ಸಂಘರ್ಷಗಳು ಪ್ರಾರಂಭವಾದಾಗ ಜನರು ಸಾಮಾನ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದು ಪ್ರಪಂಚದಾದ್ಯಂತದ ಬೆಳೆದು ಬಂದಿರುವ ಪ್ರವೃತ್ತಿಯಾಗಿದೆ’ ಎಂದು ಹೇಳಿದ್ದಾರೆ.
ಯುದ್ಧವು ಉಲ್ಬಣಗೊಂಡರೆ, ಅದು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಚಿನ್ನದ ವಿಷಯದಲ್ಲಿ ಇದು ನಿಜವಲ್ಲ. ಚಿನ್ನದ ಬೇಡಿಕೆ ಹೆಚ್ಚುತ್ತದೆ. ಹಳದಿ ಲೋಹದ ಬೇಡಿಕೆಯನ್ನು ಪೂರೈಸದಿದ್ದಾಗ, ಸ್ವಾಭಾವಿಕವಾಗಿ ಅದರ ಬೆಲೆಗಳು ಜಾಗತಿಕವಾಗಿ ಹೆಚ್ಚಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗ ಇದೇ ರೀತಿಯ ಪ್ರವೃತ್ತಿಯು ಚಾಲ್ತಿಯಲ್ಲಿತ್ತು ಎಂದು ಪ್ರೊ.ಕೇಶವ್ ಹೇಳಿದ್ದಾರೆ.
ಎಷ್ಟಾಗಲಿದೆ ಚಿನ್ನದ ಬೆಲೆ?
10 ಗ್ರಾಂಗೆ ( 24 ಕ್ಯಾರೆಟ್ ) ಗೆ 58,680 ರೂಪಾಯಿ ಇರುವ ಚಿನ್ನದ ಬೆಲೆ ಶೀಘ್ರದಲ್ಲೇ 70,000 ಕ್ಕೆ ತಲುಪುವ ಸಾಧ್ಯತೆಯಿದೆ.
ಈಗ 10 ಗ್ರಾಂಗೆ 53,000 ರೂ ದಾಟಿರುವ 22 ಕ್ಯಾರೆಟ್ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ 60,000 ರೂ.ಗೆ ಏರಬಹುದು.
ಕಳೆದ ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಯುದ್ಧವನ್ನು ಘೋಷಣೆ ಮಾಡಿದೆ. ಗಾಜಾ ಪಟ್ಟಿಯಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ಮಾಡುತ್ತಿದೆ. ಎರಡೂ ಬದಿಯಲ್ಲಿ ಸಾವಿರಾರು ಮಂದಿ ಈಗಾಗಲೇ ಹತ್ಯೆಯಾಗಿದ್ದಾರೆ. ಹಮಾಸ್ ಅನ್ನು ಮುಗಿಸಿಯೇ ತೀರುತ್ತೇವೆ ಎಂದು ಇಸ್ರೇಲ್ ಹೇಳುತ್ತಿದೆ. ನಾವು ಇಸ್ರೇಲ್‌ಗೆ ಹೆದರುವುದಿಲ್ಲ. ನಮ್ಮ ಬೆಂಬಲಿಸಲು ಹಲವು ದೇಶಗಳಲ್ಲಿ ಹೋರಾಟಗಾರರಿದ್ದಾರೆ ಎಂದು ಹಮಾಸ್ ನಾಯಕರು ಹೇಳಿದ್ದಾರೆ.