ವಿಮಲ್ ಪಾನ್ ಮಸಾಲದ ಜಾಹೀರಾತಿಗೆ ಭಾರಿ ವಿರೋಧದ ಬಳಿಕ ಸ್ಪಷ್ಟನೆ ನೀಡಿದ ನಟ ಅಕ್ಷಯ್ ಕುಮಾರ್!
ನಟ ಅಕ್ಷಯ್ ಕುಮಾರ್ (Akshay Kumar) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಚಿತ್ರರಂಗದಲ್ಲಿ ಅವರಿಗೆ ಹೇಳಿಕೊಳ್ಳುವಂಥ ಗೆಲುವು ಸಿಗುತ್ತಿಲ್ಲ. ಸಾಲು ಸಾಲು ಸಿನಿಮಾಗಳು ರಿಲೀಸ್ ಆದರೂ ಅಲ್ಲೊಂದು ಇಲ್ಲೊಂದು ಚಿತ್ರಗಳು ಹಿಟ್ ಆಗುತ್ತವೆ. ಈಗ ಅಕ್ಷಯ್ ಕುಮಾರ್ ಅವರ ಹೊಸ ವಿಮಲ್ ಜಾಹೀರಾತು ಪ್ರಸಾರ ಕಂಡಿತ್ತು. ಅಕ್ಷಯ್ ಹೊಸ ಜಾಹೀರಾತಿನಲ್ಲಿ ಭಾಗಿ ಆಗಿದ್ದಾರೆ ಎಂದೇ ಎಲ್ಲ ಕಡೆಗಳಲ್ಲೂ ಸುದ್ದಿ ಆಯಿತು. ಈ ಕುರಿತು ಅಕ್ಷಯ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಕ್ಷಯ್ ಕುಮಾರ್ ಅವರು ‘ವಿಮಲ್ ಪಾನ್ ಮಸಾಲ’ದ ರಾಯಭಾರಿ ಆದ ಬಳಿಕ ಅವರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಕ್ಷಮೆ ಕೇಳಿದ್ದ ಅವರು ರಾಯಭಾರತ್ವ ತೊರೆದಿದ್ದರು. ಜೊತೆಗೆ ಒಪ್ಪಂದ ಮುಗಿಯುವವರೆಗೆ ಶೂಟ್ ಮಾಡಿಕೊಂಡಿದ್ದ ಜಾಹೀರಾತನ್ನು ಪ್ರಸಾರ ಆಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ವಿಮಲ್ನ ಹೊಸ ಜಾಹೀರಾತು ಪ್ರಸಾರ ಕಂಡಿತ್ತು. ಇದರಲ್ಲಿ ಅಕ್ಷಯ್ ಕೂಡ ಕಾಣಿಸಿಕೊಂಡಿದ್ದರು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ಈ ಜಾಹೀರಾತು ಶೂಟ್ ಆಗಿದ್ದು 2021ರ ಅಕ್ಟೋಬರ್ 13ರಂದು. ನನಗೂ ಆ ಬ್ರ್ಯಾಂಡ್ಗೂ ಯಾವುದೇ ಸಂಬಂಧ ಇಲ್ಲ. ಈಗಾಗಲೇ ಶೂಟ್ ಮಾಡಿಕೊಂಡಿರುವ ಜಾಹೀರಾತನ್ನು ಮುಂದಿನ ತಿಂಗಳ ಕೊನೆಯವರೆಗೆ ಪ್ರಸಾರ ಮಾಡುವ ಹಕ್ಕು ಅವರಿಗೆ ಇದೆ’ ಎಂದಿದ್ದಾರೆ. ಈ ಮೂಲಕ ಇದು ಹಳೆಯ ಜಾಹೀರಾತು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
#AkshayKumar returns as the ambassador of Vimal Pan Masala; features along with #AjayDevgn and #ShahRukhKhan in the new commercialhttps://t.co/ZpvLnYgX1e
— BollyHungama (@Bollyhungama) October 9, 2023
ವೈರಲ್ ಜಾಹೀರಾತನ್ನು ನೋಡಿದ ಅನೇಕರು ಇದು ಹಳೆಯ ಜಾಹೀರಾತಿರಬಹುದು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಶಾರುಖ್ ಖಾನ್ ಅವರು ಉದ್ದನೆಯ ಕೂದಲು ಬಿಟ್ಟು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಇಷ್ಟು ಉದ್ದನೆಯ ಕೂದಲು ಬಿಟ್ಟುಕೊಂಡಿದ್ದು ‘ಪಠಾಣ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ. ಹೀಗಾಗಿ, ಇದು ಅದೇ ಸಂದರ್ಭದಲ್ಲಿ ಚಿತ್ರೀಕರಿಸಿದ ಜಾಹೀರಾತು ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.