5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ; ಇಲ್ಲಿದೆ ಅಪ್ಡೇಟ್

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Election 2023) ಚುನಾವಣೆ ಆಯೋಗವು ದಿನಾಂಕ ಘೋಷಿಸಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಹಾಗೂ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ ಆಯೋಗವು ಸುದ್ದಿಗೋಷ್ಠಿ ಮೂಲಕ ದಿನಾಂಕ ಘೋಷಿಸಿದೆ. ಡಿಸೆಂಬರ್ 3ರಂದು ಐದೂ ರಾಜ್ಯಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಛತ್ತೀಸ್‌ಗಢದಲ್ಲಿ ಮಾತ್ರ ಎರಡು ಹಂತಗಳಲ್ಲಿ ಮತದಾನ ನಡೆದರೆ, ಉಳಿದ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಚುನಾವಣೆ ದಿನಾಂಕ
- ತೆಲಂಗಾಣ- ನವೆಂಬರ್ 30
- ಮಧ್ಯಪ್ರದೇಶ- ನವೆಂಬರ್ 17
- ರಾಜಸ್ಥಾನ- ನವೆಂಬರ್ 23
- ಮಿಜೋರಾಂ- ನವೆಂಬರ್ 7
- ಛತ್ತೀಸ್‌ಗಢ- ನವೆಂಬರ್ 7 ಹಾಗೂ 17 (ಎರಡು ಹಂತಗಳಲ್ಲಿ ಮತದಾನ)
“ಐದೂ ರಾಜ್ಯಗಳಲ್ಲಿ ಶಾಂತಿಯುತ ಮತದಾನ ಹಾಗೂ ಗರಿಷ್ಠ ಮತದಾನಕ್ಕಾಗಿ ಚುನಾವಣೆ ಆಯೋಗವು ಸಕಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಿರಿಯ ನಾಗರಿಕರು ಮನೆಯಿಂದಲೇ ಮತದಾನ ಮಾಡುವ ಸೌಕರ್ಯವಿದೆ. ಐದೂ ರಾಜ್ಯಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 60 ಲಕ್ಷ ಇದೆ” ಎಂದು ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.
ಯಾವ ರಾಜ್ಯದಲ್ಲಿ ಯಾವ ಸರ್ಕಾರ?
ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಆಡಳಿತದಲ್ಲಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ನ ಜೊರಾಮ್‌ಥಾಂಗ ಮುಖ್ಯಮಂತ್ರಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ.
ಐದೂ ರಾಜ್ಯಗಳಲ್ಲಿ ಆಯಾ ಪಕ್ಷಗಳು ಮುನ್ನಡೆ ಸಾಧಿಸುವ, ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ದಿಸೆಯಲ್ಲಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಪ್ರಸ್ತುತ ಸರ್ಕಾರಗಳ ಅವಧಿ ಮಿಜೋರಾಂನಲ್ಲಿ ಡಿಸೆಂಬರ್ 17, 2023, ಮಧ್ಯಪ್ರದೇಶದಲ್ಲಿ ಜನವರಿ 6, ಛತ್ತೀಸ್‌ಗಢದಲ್ಲಿ ಜನವರಿ 3, ರಾಜಸ್ಥಾನದಲ್ಲಿ ಜನವರಿ 14, ತೆಲಂಗಾಣದಲ್ಲಿ ಜನವರಿ 16ಕ್ಕೆ ಮುಗಿಯಲಿದೆ.
SCHEDULE OF #Telangana Legislative Assembly Election . Details 👇#ECI #AssemblyElections2023 #MCC #ElectionSchedule pic.twitter.com/iVdDXfcKr5
— Election Commission of India #SVEEP (@ECISVEEP) October 9, 2023