ಕುಮಾರಸ್ವಾಮಿ ನನಗೆ ಸಹೋದರ ಹಾಗೂ ದೇವೇಗೌಡರು ನನಗೆ ತಂದೆ ಸಮಾನ ; ಅಮಿತ್ ಶಾ ಭೇಟಿಯಾಗಿದ್ದು ನೋವು ತಂದಿದೆ - ಸಿಎಂ ಇಬ್ರಾಹಿಂ
ಬೆಂಗಳೂರು: ಹೆಚ್’ಡಿ.ಕುಮಾರಸ್ವಾಮಿ ಅವರು ನನಗೆ ಕಿರಿಯ ಸಹೋದರರಿದ್ದಂತೆ. ಆದರೆ, ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ನನಗೆ ತಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಜೆಡಿಎಸ್ ಪಕ್ಷದ ನಾಯಕರೇ ಬಿಜೆಪಿಯ ಬಳಿ ಹೋಗಿದ್ದು ಸರಿಯಲ್ಲ. ಅವರೇ ನಮ್ಮ ಬಳಿ ಬರಬೇಕಿತ್ತು. ಮೈತ್ರಿ ಆದ ಬಳಿಕ ಕುಮಾರಸ್ವಾಮಿ ಜೊತೆ ಇಲ್ಲಿಯವರೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ನನಗೆ ಸಹೋದರನಂತೆ. ದೇವೇಗೌಡರು ತಂದೆ ಸಮಾನ. ದೆಹಲಿಗೆ ಹೋಗುತ್ತಿದ್ದೇವೆಂದು ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ದಾರೆ ಎನ್ನುವುದನ್ನೂ ಹೇಳಿಲ್ಲ. ಪಕ್ಷದ ಅಧ್ಯಕ್ಷರಿಗೇ ಮೈತ್ರಿ ಆಗಿದೆ ಎಂಬುದು ಹೇಳಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಶೇಕಡಾ 20 ರಷ್ಟು ಮುಸ್ಲಿಂ ಮತ ಬಂದಿದೆ. ಒಕ್ಕಲಿಗ ಮತ ಕಾಂಗ್ರೆಸ್ ಗೆ ಹೋಗಿದೆ. ಪಕ್ಷದ ತೀರ್ಮಾನ ಎಂದು ಕರೆಯಲು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಬೇಕು. ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದಿದ್ದರು. ಆದರೆ, ನನ್ನ ಜೊತೆ ಮಾತನಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
#WATCH | Karnataka: JDS leader CM Ibrahim says, "HD Kumaraswamy is like a younger brother to me and Devegowda is my father figure and I respect them... I am hurt that Kumaraswamy met with Amit Shah. Any decision of a party is taken by the Party President... Deve Gowda's… pic.twitter.com/xwfBHGYQff
— ANI (@ANI) September 30, 2023
ಜೆಡಿಎಸ್ ಪಕ್ಷದಲ್ಲಿ ಮುಂದುವರೆಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅ.16ರಂದು ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಹೈಕಮಾಂಡ್ ನಾಯಕರು ಮಾತನಾಡಿದ್ದಾರೆ. ಜನತಾದಳ ಸೇರಲು ದೇವೇಗೌಡರು ಕಾರಣ. ಸೆಕ್ಯುಲರ್ ಸಿದ್ದಾಂತ ಎಂದು ಜೆಡಿಎಸ್ಗೆ ಹೋದೆ. ಅಂದು ಪರಿಷತ್ ಸದಸ್ಯ ಸ್ಥಾನ ಬಿಟ್ಟು ಹೋದೆ. ಇಲ್ಲಿ ಪಕ್ಷದ ಅಧ್ಯಕ್ಷನಾಗಿದ್ದೇನೆ. 16ನೇ ತಾರೀಖಿನ ಸಭೆಯ ಅಜೆಂಡಾ ಏನೆಂದರೆ, ಈ ಮೈತ್ರಿ ಮಾತುಕತೆ ಸರಿಯೇ? ಮೈತ್ರಿ ಮುಂದುವರಿದರೆ, ಮುಂದಿನ ನಡೆಯೇನು? ದೇವೇಗೌಡರ ಮನವೊಲಿಸುವ ಬಗ್ಗೆ ಚರ್ಚೆ ನಡೆಸಲಿದ್ದೇವೆ. ದೇವೇಗೌಡರು ಒಪ್ಪದೇ ಇದ್ದರೆ, ಮುಂದಿನ ನಡೆ ಏನು ಅನ್ನೋ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ತಿಪ್ಪೇಸ್ವಾಮಿ ಮೂಲಕ ನನ್ನ ಜತೆ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ. 16ನೇ ತಾರೀಖು ನಾನು ಮಾತನಾಡ್ತೀನಿ ಎಂದು ಹೇಳಿದ್ದೇನೆ ಎಂದರು.
ಮೈತ್ರಿ ಯಿಂದ ಜೆಡಿಎಸ್ ಗೆ ಲಾಭ ಇದೆಯೇ ಎನ್ನುವ ಪ್ರಶ್ನೆಗೆ, 3-4 ಸೀಟು ಬಂದರೂ ಬರದೇ ಇದ್ದರೂ ನಮ್ಮ ಸಿದ್ದಾಂತ ಏನಾಯಿತು.? ನಮ್ಮ ಸಿದ್ದಾಂತವನ್ನು ಬಿಜೆಪಿ ಒಪ್ಪುತ್ತಾರೆಯೇ? 16 ತಾರೀಖು ಚರ್ಚೆ ಮಾಡುತ್ತೇವೆ. ದೆಹಲಿಗೆ ಹೋಗುವಾಗ ನನ್ನ ಬಿಟ್ಟು ಹೋದರಲ್ಲಾ ಎಂಬ ನೋವಿದೆ, ಇವರು ಬಿಜೆಪಿ ಹತ್ತಿರ ಹೋಗಿದ್ದು ತಪ್ಪು. ಅವರೇ ನಮ್ಮ ಬಳಿ ಬರಬೇಕಿತ್ತು. ಪಕ್ಷದ ಕಾರ್ಯಕರ್ತರ ಮುಂದೆ ತಲೆ ತಗ್ಗಿಸೋ ಪರಿಸ್ಥಿತಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಯಾರ ಮೇಲೂ ಅವಲಂಬಿತವಾಗಿರಲಿಲ್ಲ, ಅವರು ನಮ್ಮ ಮೇಲೆ ಡಿಪೆಂಡ್ ಆಗಿದ್ದರು. ಈಗ ಹೋಗಿ ಮಾತಾಡಿದ್ದೇ ಮಾಡಿದ ತಪ್ಪು. ವಯಸ್ಸಾದ ಕಾಲದಲ್ಲಿ ದೇವೇಗೌಡರ ಕೈ ಹಿಡಿದೆ ಎಂಬ ತೃಪ್ತಿ ಇದೆ. ನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ. 60 ವರ್ಷದ ರಾಜಕೀಯದಲ್ಲಿ ಕಳಂಕ ನನ್ನ ಮೇಲೆ ಇಲ್ಲ. 16ನೇ ತಾರೀಖಿನಂದು ಮುಂದೆ ಏನು ಮಾಡಬೇಕು ಎಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪವಾರ್, ನಿತೀಶ್, ಆಪ್, ಕಾಂಗ್ರೆಸ್ ಪಕ್ಷವೋ ಏನು ಅಂತಾ ತೀರ್ಮಾನಿಸುತ್ತೇನೆ. ಕಾಂಗ್ರೆಸ್, ಬಿಜೆಪಿಗೆ ಒಳ್ಳೆಯದಾಗಬೇಕು ಅಂದರೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಇರಬೇಕು ಎಂದು ಹೇಳಿದರು.
ನನ್ನ ನಿಲುವು ಪಕ್ಷದ ಅಧ್ಯಕ್ಷನಾಗಿ ಈಗಲೇ ಹೇಳುವುದರಲ್ಲಿ ಅರ್ಥ ಇಲ್ಲ. ನಿರೀಕ್ಷಣೆ ಮಾಡಿ ಉತ್ತರ ಕೊಡುವವನು ಅಲ್ಲ ನಾನು. ಇಂದು ಪಾಂಡವರ ಸ್ಥಿತಿಯೇ ನಮಗೆ ಆಗಿದೆ. ಮದುವೆಗೆ ಹೋಗುವುದು ಬೇರೆ, ಮದುವೆ ಆಗುವುದು ಬೇರೆ. ಪಕ್ಷ ಬೇರೆ, ಸದನದ ನಡವಳಿಕೆ ಬೇರೆ. ನಮ್ಮ ಸಿದ್ದಾಂತ ಬಿಜೆಪಿಯವರು ಒಪ್ಪುತ್ತಾರಾ? ಜನತಾದಳ ಸೀಟು ನೋಡಿ ರಾಜಕೀಯ ಮಾಡುವ ಪಕ್ಷ ಅಲ್ಲ. ಕುಮಾರಸ್ವಾಮಿ ತಿಪ್ಪೇಸ್ವಾಮಿ ಮೂಲಕ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ನಾಳೆಯ ಸಭೆಗೆ ಕರೆದಿದ್ದಾರೆ, ಹೋಗಲ್ಲ.
ದೆಹಲಿಗೆ ಹೋಗುವಾಗ ಹೇಳದೇ ಹೋಗಿದ್ದು, ನನಗೆ ನೋವಾಗಿದೆ. ಈಗ ನಾನು ಪಕ್ಷದ ಕಾರ್ಯಕರ್ತರ ಮುಂದೆ ತಲೆ ಬಗ್ಗಿಸುವ ಪರಿಸ್ಥಿತಿ ಬಂದಿದೆ. ನನ್ನ ಕಡೆಗಣಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ನಾವು ಅವರ ಹೊಲಕ್ಕೇ ಗೊಬ್ಬರ ಹೊಡೆಯುತ್ತಿದ್ದೇವೆ. ನನ್ನ ಕಡೆಗಣಿಸಿ ಅವರಿಗೆ ಏನಾಗಬೇಕಿದೆ? ಬಿಜೆಪಿಯವರು ದೇವೇಗೌಡರ ಮನೆ ಬಾಗಿಲಿಗೆ ಬರಬೇಕಿತ್ತು. ಅಲ್ಪಸಂಖ್ಯಾತರಿಗೆ ದೇವೇಗೌಡರ ಬಗ್ಗೆ ವಿಶ್ವಾಸ ಇದ್ದಿದ್ದಕ್ಕೆ ಮತಗಳು ಬಂದಿವೆ. ಒಕ್ಕಲಿಗರ ಜನತಾದಳದ ಮೂಲ ಮತಗಳು ಕಾಂಗ್ರೆಸ್ ಗೆ ಹೋಗಿವೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆನ್ನಲ್ಲೇ ಮಸ್ಲಿಂ ನಾಯಕರು ಜೆಡಿಎಸ್ ತೊರೆಯುತ್ತಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ನಾಯಕರು ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಒಂದು ವೇಳೆ ಹೋಗಿದ್ದರೆ ರಾಜೀನಾಮೆ ನನಗೇ ಬರಬೇಕಲ್ವಾ? ಎಂದರು.