2000 ಮುಖ ಬೆಲೆಯ ನೋಟು ಚಲಾವಣೆ ಮತ್ತು ವಿನಿಮಯ ಮಾಡಲು ಇಂದು ಕೊನೆ..!
2000 ರೂಪಾಯಿ ನೋಟುಗಳ ಬದಲಾವಣೆಗೆ ಅಂತಿಮ ದಿನಾಂಕವು ಇಂದು ಅಂದ್ರೆ ಸೆಪ್ಟೆಂಬರ್ 30 ಆಗಿದ್ದು, ಮತ್ತೆ ದಿನಾಂಕ ವಿಸ್ತರಣೆ ಆಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಕುರಿತು ಸ್ಪಷ್ಟಪಡಿಸಿರುವ ಆರ್ಬಿಐ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರಿಗೆ ಹೆಚ್ಚಿನ ಸಮಯ ಸಿಗುವುದಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ.
ನೋಟು ಬದಲಾಯಿಸದಿದ್ರೆ ಏನಾಗಲಿದೆ?
ಇಂದಿನವರೆಗೂ ನೋಟುಗಳನ್ನು ಬದಲಾಯಿಸದಿದ್ದರೆ, ನಾಳೆಯಿಂದ ಅವುಗಳ ಮೌಲ್ಯವು ಕೇವಲ ಕಾಗದದ ತುಂಡುಗಳಾಗುವುದು ಗ್ಯಾರೆಂಟಿ. ಸುದ್ದಿ ಸಂಸ್ಥೆ ಎಎನ್ಐ ಅನ್ನು ಉಲ್ಲೇಖಿಸಿ ಮಿಂಟ್ ವರದಿಯಲ್ಲಿ, 2000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಗಡುವನ್ನು ವಿಸ್ತರಿಸಲು ಹೋಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಇಂದು ನಿಮಗೆ ಕೊನೆಯ ಅವಕಾಶವಾಗಿದೆ.
ರಿಸರ್ವ್ ಬ್ಯಾಂಕ್ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಎನ್ಆರ್ಐಗಳಿಗೆ 2023 ರ ಅಕ್ಟೋಬರ್ 31 ರವರೆಗೆ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಗಡುವನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಈಗ ನಾವು ಎಎನ್ಐ ವರದಿಯನ್ನು ನಂಬಿದರೆ, ಇಂದಿನ ನಂತರ ರೂ 2000 ನೋಟು ಬದಲಾಯಿಸಲು ಸಮಯವಿಲ್ಲ ಎಂದು ಅರ್ಥ.
ಆರ್ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿತ್ತು
ಮೇ 19, 2023 ರಂದು ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತ್ತು. ಇದಕ್ಕಾಗಿ, ಜನರು ತಮ್ಮ ಬ್ಯಾಂಕ್ ಅಥವಾ ಹತ್ತಿರದ ಅಂಚೆ ಕಚೇರಿಗೆ ಹೋಗಿ ತಮ್ಮ ಹಳೆಯ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದು ಬ್ಯಾಂಕ್ ಜನರಿಗೆ 4 ತಿಂಗಳ ಕಾಲಾವಕಾಶ ನೀಡಿತ್ತು. ಇದರ ಗಡುವು ಸೆಪ್ಟೆಂಬರ್ 30, 2023 ರಂದು ಕೊನೆಗೊಳ್ಳುತ್ತದೆ, ಅಂದರೆ ಶನಿವಾರ. ನೀವು ಇನ್ನೂ ಈ ಕೆಲಸವನ್ನು ಮಾಡದಿದ್ದರೆ ಇಂದು ನಿಮಗೆ ಕೊನೆಯ ಅವಕಾಶವಾಗಿದೆ. ನೆನಪಿನಲ್ಲಿಡಿ, ರಿಸರ್ವ್ ಬ್ಯಾಂಕ್ ಒಂದು ಬಾರಿಗೆ 20,000 ರೂ.ವರೆಗಿನ 2000 ರೂ ನೋಟುಗಳನ್ನು ಮಾತ್ರ ಬದಲಾಯಿಸುವ ಮಿತಿಯನ್ನು ನಿಗದಿಪಡಿಸಿದೆ.
ಸೆಪ್ಟೆಂಬರ್ 2 ರಂದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸುಮಾರು 93 ಪ್ರತಿಶತ 2000 ರೂ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಇಂತಹ ಪರಿಸ್ಥಿತಿಯಲ್ಲಿ ಈ ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. ಅದೇ ಸಮಯದಲ್ಲಿ, ಸುಮಾರು 24,000 ಕೋಟಿ ರೂ. ಅಂದರೆ ಶೇಕಡಾ 7 ರಷ್ಟು ಮೊತ್ತವು ಬ್ಯಾಂಕಿಂಗ್ ವ್ಯವಸ್ಥೆಗೆ ಬರಲು ಇನ್ನೂ ಉಳಿದಿದೆ. ಮಿಂಟ್ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ವಿವಿಧ ಬ್ಯಾಂಕ್ಗಳಿಂದ ತೆಗೆದುಕೊಂಡ ಡೇಟಾ ಪ್ರಕಾರ, ಠೇವಣಿ ಮಾಡಿದ ನೋಟುಗಳಲ್ಲಿ 87 ಪ್ರತಿಶತದಷ್ಟು ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಉಳಿದ ಶೇ.13 ಮೊತ್ತವನ್ನು ಇತರೆ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.
ಇನ್ಮುಂದೆ ಪಿಂಚಣಿದಾರರ ಮನೆಗೇ ಬಂದು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲಿದ್ದಾರೆ ಬ್ಯಾಂಕ್ ಸಿಬ್ಬಂದಿ!
ಹೊಸದಿಲ್ಲಿ: ಪಿಂಚಣಿದಾರರು ತಮ್ಮ ಮನೆಯಿಂದಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ (DLC)ಸಲ್ಲಿಸಬಹುದು. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಪಿಂಚಣಿದಾರರಿಗೆ ಅಕ್ಟೋಬರ್ 1ರಿಂದ ಈ ಸೌಲಭ್ಯ ಆರಂಭವಾಗಲಿದೆ. ಜೀವಿತ ಪ್ರಮಾಣಪತ್ರದ ಸಲ್ಲಿಕೆಯು ಹಿರಿಯ ಪಿಂಚಣಿದಾರರಿಗೆ ಪ್ರತಿ ವರ್ಷ ಅಕ್ಟೋಬರ್ 1 ರಿಂದ ಪ್ರಾರಂಭವಾಗುತ್ತದೆ. ಆದರೆ, ಇತರರಿಗೆ ಪ್ರತಿ ವರ್ಷ ನವೆಂಬರ್ 1 ರಿಂದ ಜೀವನ ಪ್ರಮಾಣಪತ್ರ ಸಲ್ಲಿಕೆ ಪ್ರಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಮನೆಗಳಿಗೇ ಹೋಗಿ ಪಿಂಚಣಿ ಜೀವನ ಪ್ರಮಾಣಪತ್ರ ಸಲ್ಲಿಸಲು ನೆರವಾಗುವಂತೆ ಪಿಂಚಣಿ ನಿಯಂತ್ರಕ ಪಿಎಫ್ಆರ್ಡಿಎ, ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ.
ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನ ಬಳಸಿ ಜೀವನ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ವೇದಿಕೆಗಳನ್ನು ಬಳಸಲು ಪಿಂಚಣಿ ವಿಮಾ ನಿಯಂತ್ರಕ ಎಲ್ಲಾ ಬ್ಯಾಂಕ್ಗಳಿಗೆ ಸಲಹೆ ನೀಡಿದೆ. ಮನೆ ಬಾಗಿಲಿಗೆ ಬ್ಯಾಂಕಿಂಗ್ ಅಧಿಕಾರಿಗಳನ್ನು ಕಳುಹಿಸುವ ಮೂಲಕ ಹಾಸಿಗೆ ಹಿಡಿದಿರುವ, ಆಸ್ಪತ್ರೆಗೆ ದಾಖಲಾದ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಸುವ ಸೌಲಭ್ಯ ಒದಗಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ಡಿಜಿಟಲ್ ಲೈಫ್ ಪ್ರಮಾಣಪತ್ರದಲ್ಲಿ ಬಳಸುವ ಫೇಸ್ ಅಥೆಂಟಿಕೇಷನ್ ತಂತ್ರಜ್ಞಾನದ ಮೂಲಕ, ಪ್ರತಿಯೊಬ್ಬ ನಾಗರಿಕರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಮನೆಯಿಂದಲೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅಥವಾ ಬ್ಯಾಂಕ್ ಶಾಖೆಯ ಮೂಲಕ ಸಲ್ಲಿಸಬಹುದು.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಎಂದರೇನು?
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪ್ರಕಾರ, ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ್ ಪ್ರಮಾಣ ಪತ್ರ) ಪಿಂಚಣಿದಾರರಿಗೆ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಸೇವೆಯಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಪಿಂಚಣಿದಾರರು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಥವಾ ಪಿಂಚಣಿ ವಿತರಣಾ ಏಜೆನ್ಸಿಗಳು ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC)ಗಾಗಿ ಈ ಸೌಲಭ್ಯ ಪಡೆಯಬಹುದು.
ಫೇಸ್ ಅಥೆಂಟಿಕೇಷನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?
ಸರ್ಕಾರವು ಈಗ ಆಧಾರ್ ಡೇಟಾಬೇಸ್ ಆಧಾರಿತ ಫೇಸ್ ಅಥೆಂಟಿಕೇಷನ್ ತಂತ್ರಜ್ಞಾನ ವ್ಯವಸ್ಥೆಯನ್ನು ರಚಿಸಿದೆ. ಇದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ಹೊಂದಿರುವ ಯಾರಾದರೂ ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು (ಡಿಎಲ್ಸಿ) ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಪಿಂಚಣಿದಾರರು ಜೀವನ್ ಪ್ರಮಾಣ್ ಪೋರ್ಟಲ್ನ ಅಧಿಕೃತ ವೆಬ್ಸೈಟ್ ಮೂಲಕವೂ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.