21 ವರ್ಷದ ಗರ್ಭಿಣಿ ಮಹಿಳೆಯನ್ನು ಕಾಡಿಗೆ ಕರೆದೊಯ್ದು ಬೆಂಕಿ ಹಚ್ಚಿದ ಸಹೋದರ, ತಾಯಿ!
ಹಾಪುರ್: ಉತ್ತರ ಪ್ರದೇಶದ ಹಾಪುರ್ನಲ್ಲಿ ಗರ್ಭಿಣಿ ಮಹಿಳೆಯನ್ನು ಆಕೆಯ ತಾಯಿ ಮತ್ತು ಸಹೋದರ ಬೆಂಕಿ ಹಚ್ಚಿದ ನಂತರ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಅವಿವಾಹಿತ ಮಗಳು ಗರ್ಭಿಣಿಯಾಗಿರುವ ವಿಷಯ ತಿಳಿದ ಮಹಿಳೆಯ ಮನೆಯವರು ಆಕ್ರೋಶಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರು ಮಗುವಿನ ತಂದೆಯ ಬಗ್ಗೆ ಕೇಳಿದರು, ಆದರೆ ಗರ್ಭಿಣಿ ಮಹಿಳೆ ಅವರಿಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಿಲ್ಲ. ನಂತರ 21 ವರ್ಷದ ಮಹಿಳೆಯ ತಾಯಿ ಮತ್ತು ಸಹೋದರ ಆಕೆಯನ್ನು ಕಾಡಿಗೆ ಕರೆದೊಯ್ದು ಬೆಂಕಿ ಹಚ್ಚಿದ್ದಾರೆ. ಅರಣ್ಯದಲ್ಲಿದ್ದ ಕೆಲವು ರೈತರು ಮಹಿಳೆಯನ್ನು ಗಮನಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ವೈದ್ಯರು ಆಕೆಯನ್ನು ಮೀರತ್ನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆಕೆಯ ತಾಯಿ ಮತ್ತು ಸಹೋದರನನ್ನು ಬಂಧಿಸಲಾಗಿದೆ. “ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾರೆ ಕೆಲಸಕ್ಕೆ ಬಂದಿದ್ದ ಯುವಕನ ಬರ್ಬರ ಹತ್ಯೆ:
ಹುಬ್ಬಳ್ಳಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆಗೈದಿರುವ (Murder) ಪ್ರಕರಣ ನಗರದ (Hubballi) ಸಿಲ್ವರ್ ಟೌನ್ನಲ್ಲಿ ನಡೆದಿದೆ.
ಮೃತ ಯುವಕನನ್ನು ಮೌಲಾಲಿ (24) ಎಂದು ಗುರುತಿಸಲಾಗಿದೆ. ಆತ ಮುಂಡಗೋಡಿನ ಮರಗಡಿ ಮೂಲದವನು ಎಂದು ತಿಳಿದು ಬಂದಿದೆ. ನಗರಕ್ಕೆ ಗಾರೆ ಕೆಲಸ ಮಾಡಲು ಬಂದಿದ್ದ. ಈ ವೇಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ನಿರ್ಮಾಣ ಹಂತದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗಲೇ ಆತನನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಗೋಕುಲ ರಸ್ತೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಬೆಳಗಾವಿ: ಇನ್ಸ್ಟಾಗ್ರಾಮ್ನಲ್ಲಿ ನಡೆದ ಕಿತ್ತಾಟ ಕೊನೆಗೆ ಬಾಲಕನ ಹತ್ಯೆಯಲ್ಲಿ ಕೊನೆಯಾಗಿದೆ. ಚಾಟಿಂಗ್ ವಿಚಾರದಲ್ಲಿ ಶುರುವಾದ ಜಗಳ ಪ್ರಜ್ವಲ್ ಸುಂಕದ(17) ಎನ್ನುವ ಅಪ್ರಾಪ್ತ ಬಾಲಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಹುಡುಗಿ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಪ್ರಜ್ವಲ್ಗೆ ಮೆಸೇಜ್ ಮಾಡಲಾಗಿದೆ. ಮೆಸೇಜ್ ಮಾಡುತ್ತಿರುವುದು ಹುಡುಗ ಎಂದು ಗೊತ್ತಾಗುತ್ತಿದ್ದಂತೆಯೇ ಮೆಸೇಜ್ನಲ್ಲಿ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೆರಳಿ ಗ್ಯಾಂಗ್ ಕಟ್ಟಿಕೊಂಡು ಬಂದು ಪ್ರಜ್ವಲ್ ಜತೆಗೆ ಜಗಳ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂತಿಮವಾಗಿ ಪ್ರಜ್ವಲ್ನನ್ನು ಹತ್ಯೆ ಮಾಡಿದ್ದಾರೆ.
ಸೆಪ್ಟೆಂಬರ್ 26ರಂದು ಸಂಜೆ ಹುಡುಗರ ಗ್ಯಾಂಗ್ , ಪ್ರಜ್ವಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ಕು ಬಾಲಾಪರಾಧಿಗಳು ಸೇರಿ ವಿಶಾಲ್ ಎಂಬಾತನನ್ನು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಇನ್ನೂ ಬಾಲಿ ಬದುಕಬೇಕಿದ್ದ ಬಾಲಕ ಪ್ರಜ್ವಲ್ನನ್ನು ಕ್ಷುಲ್ಲಕ ಕಾರಣಕ್ಕೆ ಜೀವ ತೆಗೆದಿರುವುದು ದುರಂತ.