ಭೀಕರ ಅಪಘಾತ : ಕಾರು - ಬಸ್ ಅಪಘಾತ; ತಂದೆ, ಮಗ ಸಾವು
ಗದಗ ಭೀಕರ ಅಪಘಾತ : ಕಾರು (Car) ಹಾಗೂ ಸರ್ಕಾರಿ ಬಸ್ (Bus) ನಡುವೆ ಭೀಕರ ಅಪಘಾತ (Accident) ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ತಂದೆ (Father), ಮಗ (Son) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಲಕ್ಕುಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಂದೆ ಹೆಚ್. ಬಾಲರಾಜ್ (65) ಹಾಗೂ ಮಗ ವಿನಯ್ (32) ಮೃತ ದುರ್ದೈವಿಗಳು. ಮೃತರು ಹೊಸಪೇಟೆ ಮೂಲದ ನಿವಾಸಿಗಳು. ಮೃತ ತಂದೆ ನಿವೃತ್ತ ಡಿಡಿಪಿಐ ಆಗಿದ್ದು, ಮಗ ವಿನಯ್ ಪ್ರೊಫೆಸರ್ ಆಗಿದ್ದರು. ಹೊಸಪೇಟೆಯಿಂದ ಗದಗ (Gadag) ಮಾರ್ಗವಾಗಿ ಹುಬ್ಬಳ್ಳಿಗೆ (Hubballi) ಹೊರಟಿದ್ದ ವೇಳೆ ಘಟನೆ ಸಂಭವಿಸಿದೆ.
ಗದಗ ಘಟಕಕ್ಕೆ ಸಂಬಂದಿಸಿದ ಬಸ್ ಗದಗದಿಂದ ಕೊಪ್ಪಳಕ್ಕೆ (Koppal) ಹೊರಟಿತ್ತು. ಹೈವೇನಲ್ಲಿ ತಿರುವು ಪಡೆದುಕೊಂಡು ಲಕ್ಕುಂಡಿ ಗ್ರಾಮಕ್ಕೆ ಹೋಗುತ್ತಿದ್ದ ಸಂದರ್ಭ ಎದುರು ಬಂದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ಕಾರಿನಲ್ಲಿದ್ದ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೃತರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಜೆಸಿಬಿ, ಕ್ರೇನ್ ಮೂಲಕ ಪೊಲೀಸ್, ಅಗ್ನಿಶಾಮಕ ದಳ, ಹೈವೇ ಸಿಬ್ಬಂದಿ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ಮೂಲಕ ಹೊರ ತೆಗೆಯಲಾಯಿತು.
ಬಸ್‌ನಲ್ಲಿ 41 ಜನ ಪ್ರಯಾಣ ಮಾಡುತ್ತಿದ್ದು, ಸುಮಾರು 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೈವೇಯಿಂದ ಲಕ್ಕುಂಡಿ ಗ್ರಾಮಕ್ಕೆ ಹೋಗಲು ಫ್ಲೈ ಓವರ್ ಬ್ರಿಡ್ಜ್ ಹಾಗೂ ಸರ್ವಿಸ್ ರಸ್ತೆ ಮಾಡಬೇಕು. ಸೋಲಾರ್ ಸಿಗ್ನಲ್, ಸಿಸಿ ಕ್ಯಾಮೆರಾ ಅಳವಡಿಸಬೇಕು.
ಅವೈಜ್ಞಾನಿಕ ರಸ್ತೆ ತಿರುವಿನಿಂದ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 7 ಅಪಘಾತಗಳು ನಡೆದಿವೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಸರ್ವಿಸ್ ರಸ್ತೆ, ಅಂಡರ್ ಬ್ರಿಡ್ಜ್ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.