ಪ್ರೀತಿಸಿ ಮದುವೆ : ಕಿವುಡ- ಮೂಗ ದಂಪತಿಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಚಳ್ಳಕೆರೆ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ ಭೇದಭಾವವಿಲ್ಲ ಆದರೆ ಪ್ರೇಮಿಗಳಿಬ್ಬರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗಳಿಬ್ಬರನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ನಡೆದಿದೆ. ತಾಲೂಕಿನ ಎನ್.ದೇವರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾವಿತ್ರಿ ಹಾಗೂ ಮಣಿಕಂಠ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಅಲ್ಲದೆ ಇವರಿಬ್ಬರಿಂದ ಗ್ರಾಮಸ್ಥರು 30 ಸಾವಿರ ದಂಡ ಕಟ್ಟಿಸಿಕೊಂಡಿದ್ದಾರೆ.
ಇವರಿಬ್ಬರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇವರಿಬ್ಬರಿಗೂ ಪ್ರೀತಿ ಪ್ರೇಮ ಶುರುವಾಗಿದೆ. ಶ್ರವಣ ಹಾಗೂ ವಾಕ್ ದೋಷ ಸಮಸ್ಯೆ ಹೊಂದಿದ್ದರೂ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಂಡ ಹಿನ್ನೆಲೆಯಲ್ಲಿ 2021ರಲ್ಲಿ ಮದುವೆಯಾಗಿದ್ದರು.
ಆಂಧ್ರ ಪ್ರದೇಶದ ಕಾಕಿನಾಡ ಮಣಿಕಂಠ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವನಹಳ್ಳಿಯ ಸಾವಿತ್ರಿ ಮೂಗ ಜೋಡಿಯಿಬ್ಬರಿಗೆ ಗ್ರಾಮಸ್ಥರು 30 ಸಾವಿರ ದಂಡ, ಭಹಿಷ್ಕಾರದ ಶಿಕ್ಷೆ..! ಇನ್ನು ಮಣಿಕಂಠ ಅವರು, ರೆಡ್ಡಿ ಸಮುದಾಯಕ್ಕೆ ಸೇರಿದರೆ, ಯುವತಿ ಜೋಗಿ ಸಮುದಾಯಕ್ಕೆ ಸೇರಿದ್ದಾರೆ. ಇವರಿಬ್ಬರು ನ್ಯಾಯಕ್ಕಾಗಿ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ.
ಜೋಗಿ ಸಮುದಾಯದ ಮುಖಂಡರು, 30 ಸಾವಿರ ರೂ. ದಂಡ ಕೊಡದಿದ್ರೆ ಬಹಿಷ್ಕಾರ ಹಾಕೋದಾಗಿ ಬೆದರಿಕೆ ಹಾಕಿದ್ದಾರಂತೆ. ಅಲ್ಲದೆ ಯಾರಿಗಾದರೂ ದೂರು ಕೊಟ್ಟರೆ ಪ್ರಾಣ ತೆಗೆಯೋದಾಗಿ ಧಮ್ಕಿ ಹಾಕಿದ್ದಾರೆಂದು ಆರೋಪ ಕೂಡಾ ಕೇಳಿಬಂದಿದೆ.
ಇನ್ನು ಸಹಾಯಕ್ಕಾಗಿ ಡಿಡಿ ಹಾಗೂ ಸಿಡಿಪಿಒ ಮೊರೆ ಹೋದರೆ, ಒಬ್ಬರ ಮೇಲೊಬ್ಬರು ಹೇಳುತ್ತಾರೆ ಎಂಬ ಆರೋಪ ಕೂಡಾ ಕೇಳಿಬಂದಿದೆ. ಸದ್ಯ ಹಸುಗೂಸುನೊಂದಿಗೆ ದಂಪತಿಗಳಿಗೆ ಚಿತ್ರದುರ್ಗದ ಸ್ವಾಧಾರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ.
ಮನನೊಂದು ಫಸಲು ನಾಶಪಡಿಸಿದ ಮೊಳಕಾಲ್ಮುರಿನ ರೈತ
ಮೊಳಕಾಲ್ಮುರು (ಚಿತ್ರದುರ್ಗ) : ರಾತ್ರಿ ಹಗಲು, ಶ್ರಮವಹಿಸಿ ಕಣ್ಣಲ್ಲಿ ಕಣ್ಣೀಟ್ಟು ಕಾಪಾಡಿಕೊಂಡ ಸೇವಂತಿ ಹೂ ಬೆಳೆಯನ್ನು ರೈತ ತನ್ನ ಕೈಯಾರೆ ನಾಶ ಪಡಿಸಿದ ಘಟನೆ ತಾಲೂಕಿನ ಕೋನಸಾಗರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನಸೂರಯ್ಯನ ಕಪ್ಲೇಯಲ್ಲಿ ನಡೆದಿದೆ. ಈ ಬೆಳೆ ದಾನಸೂರಯ್ಯನ ಕಪ್ಲೆ ರೈತ ಮಂಜುನಾಥ್‌ರವರದ್ದಾಗಿದ್ದು, ತಾನೂ ಬೆಳೆದಿದ್ದ ಸೇವಂತಿಯನ್ನು ಮನನೊಂದು ರೋಟರ್ ಬಳಸಿ ನಾಶಪಡಿಸಿ ಕಣ್ಣೀರಿಟ್ಟಿದ್ದಾನೆ.
ಶ್ರಾವಣ ಶುರುವಾಗುತ್ತದೆ ಉತ್ತಮ ಬೆಲೆ ಸಿಗುತ್ತದೆ ಎಂದು ನಂಬಿಕೆಯಿಟ್ಟಿದ್ದ ಅನ್ನದಾತ ತನ್ನ ಕೈಯಾರೆ ಗಿಡಗಳನ್ನು ಕಿತ್ತಿದ್ದಾನೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಉತ್ತಮ ಬೆಲೆ ಸಿಗುತ್ತದೆ ಎಂಬ ರೈತನ ನಿರೀಕ್ಷೆ ದಿಢೀರ್ ಬೆಲೆ ಕುಸಿದಿಂದ ಹುಸಿಯಾಗಿದೆ. ಈ ರೈತನ ಹೊಲದಲ್ಲಿ ಹೂಗಳು ಫಲವತ್ತಾಗಿ ಬಂದ್ರೂ ಸಹ, ಲಾಭಕ್ಕಿಂತ ಖರ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಹೂಗಳನ್ನು ಧರೆಗೆ ಉರುಳಿಸಿದ್ದಾನೆ. ಸದ್ಯ ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಬೆಲೆ ಕುಸಿತವಾಗಿದೆ. ಕೆಜಿ ಹೂವಿಗೆ 20 ರಿಂದ ಮೂವತ್ತು ರೂಪಾಯಿ ಬೆಲೆ ಇದೆ. ಹೂವು ಟಾಪಾಗಿದ್ದರೆ ಕೆಜಿಗೆ 40 ರೂಪಾಯಿ ದರವಿದೆ.
ಹೂ ಕೀಳಲು ಕೂಲಿಯಾಳು ಒಬ್ಬರಿಗೆ ದಿನಕ್ಕೆ 300 ರಿಂದ ಮುನ್ನೂರೈವತ್ತು ರೂಪಾಯಿ ನೀಡಬೇಕು. ಒಬ್ಬ ಕೂಲಿಯಾಳು ದಿನಕ್ಕೆ ಹೆಚ್ಚೆಂದರೆ 40 ರಿಂದ 50 ಕೆ.ಜಿ. ತೂಕದ ಹೂ ಕೀಳಬಹುದು. ಕೂಲಿ ಹಣ ನೀಡುವುದರ ಜತೆಯಲ್ಲಿ, ಕಿತ್ತಿರುವ ಹೂವುಗಳನ್ನು ಮಾರಾಟಗಾರರಿಗೆ ತಲುಪಿಸಬೇಕು, ಬೆಳೆ ಬಾಡದಂತೆ ನೀರು ಹಾಯಿಸಬೇಕು, ಕೆಲವು ಅಗತ್ಯ ಔಷಧಿ ಸಿಂಪಡಿಸಬೇಕು ಸೇರಿದಂತೆ ಇನ್ನಿತರ ಖರ್ಚು ಹೆಚ್ಚಿದೆ. ಲಾಭಗಿಂತ ಖರ್ಚು ಹೆಚ್ಚಾದ ಪರಿಣಾಮ ರೈತ ಸೇವಂತಿ ಹೂ ನಾಶ ಮಾಡಿದ್ದಾನೆ.
ಹೊಲದಲ್ಲಿ ಹೂ ಹುಲುಸಾಗಿ ಬೆಳೆದರೂ, ನಾನಾ ಕಾರಣಗಳಿಂದ ಹೂವುಗಳನ್ನು ಕೇಳುವವರಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲೆ ಸುರಿದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದ ರೈತ ತನ್ನ ಬೆಳೆಯನ್ನು ಹಾಳು ಮಾಡಿದ್ದಾನೆ. ನಾಲ್ಕೈದು ತಿಂಗಳಿನಿಂದಲೂ ಹಗಲು ರಾತ್ರಿ ನೀರು ಹಾಯಿಸಿ ಒಂದು ಎಕರೆ ಪ್ರದೇಶದಲ್ಲಿ ಸೊಂಪಾಗಿ ಬೆಳೆದು ಹೂಬಿಟ್ಟಿದ್ದ ಸೇವಂತಿ ಭೂಮಿ ತಾಯಿಗೆ ಮಕಾಡೆ ಮಲಗಿದೆ.
1 ಎಕರೆ ಹೊಲದಲ್ಲಿ ಸೇವಂತಿಗೆ ನಾಟಿ
ತಾನು ಹಾಗೂ ತನ್ನ ಪತ್ನಿ ಮಂಜಮ್ಮಳ ಸಹಕಾರದೊಂದಿಗೆ ಹಿಂದೆ ಎರಡು ಬಾರಿ ಸೇವಂತಿ ಬೆಳೆ ಬೆಳೆದು ಅಲ್ಪ ಲಾಭವನ್ನು ಈ ದಂಪತಿ ಕಂಡಿದ್ದರು. ಅಂತೆಯೇ ಈ ವರ್ಷವೂ ಲಾಭದ ನಿರೀಕ್ಷೆಯಿಂದ ಸೇವಂತಿ ಬೆಳೆಯಲು ರೈತ ಮುಂದಾಗಿದ್ದ. ಅದಕ್ಕಾಗಿ ನಾಲ್ಕೈದು ತಿಂಗಳ ಹಿಂದೆ ತನ್ನ ಒಂದು ಎಕರೆ ಜಮೀನಿನಲ್ಲಿ ಸಸಿ ನಾಟಿ ಮಾಡಿದ್ದರು. ಅಲ್ಪ ನೀರಿನಲ್ಲಿಯೇ ಹಗಲು ರಾತ್ರಿ ನೀರು ಹಾಯಿಸಿ ಹೂ ಬೆಳೆಸಿದ್ದರು.
ಶ್ರಾವಣ ಮಾಸದಿಂದ ಹೂಗಳಿಗೆ ಸಹಜವಾಗಿ ಮಾರುಕಟ್ಟೆಯಲ್ಲಿ ಸೀಜನ್ ಆರಂಭವಾಗಿ ಬೆಲೆಯೂ ಜಾಸ್ತಿಯಾಗುತ್ತದೆ ಎಂಬುದು ರೈತನ ಚಿಂತನೆಯಾಗಿತ್ತು. ಅಲ್ಲದೇ ಹೂವಿನ ದರ ದೀಪಾವಳಿ ಹಬ್ಬದವರೆಗೂ ಹೆಚ್ಚು ಇರುತ್ತದೆ ಎಂಬ ಆಶಯವನ್ನು ರೈತ ಹೊಂದಿದ್ದರು. ಆದರೆ ಅವನ ಆಸೆ ಕಮರಿದೆ. ಎಕರೆ ಸೇವಂತಿಗೆ ಬೆಳೆಯಲು 12 ಸಾವಿರ ರೂ.ಗಳನ್ನು ತೆತ್ತು ಸಸಿ ತಂದಿದ್ದೆ, ನಾಲ್ಕು ತಿಂಗಳಿನಿಂದಲೂ ನೀರು ಹಾಯಿಸಿ ಕಷ್ಟ ಪಟ್ಟು ಬೆಳೆಸಿದ್ದೆ, ಆಗಾಗ್ಗೆ ಕಳೆ ತೆಗೆಸಿ, ಗೊಬ್ಬರ ಹಾಕಿ ಔಷಧೋಪಚಾರ ನಡೆಸಿದ್ದೇ. ಈ ಹೂವನ್ನು ಮೊಳಕಾಲ್ಮುರು, ನೆರೆಯ ಆಂಧ್ರದ ರಾಯದುರ್ಗ ಹಾಗೂ ಬಳ್ಳಾರಿ ಮಾರುಕಟ್ಟೆಗೆ ನೀಡಿ ನಾನು ನಷ್ಟ ಅನುಭವಿಸಿರಲಿಲ್ಲ.
ಈ ಬಾರಿ ಬೆಲೆ ಕುಸಿತವು ನನಗೆ ನೋವು ತಂದ ಕಾರಣ ಬೆಳೆ ನಾಶಕ್ಕೆ ನಿರ್ಧರಿಸಿದೆ ಎಂದು ರೈತ ಮಂಜುನಾಥ್ ಬೇಸರ ವ್ಯಕ್ತಪಡಿಸುತ್ತಾರೆ. ಅಲ್ಲದೇ ಬೆಳೆ ನಾಟಿಗಾಗಿ ಧರ್ಮಸ್ಥಳ ಸಂಘದಿಂದ ತಂದ ಸಾಲ, ವಾರಕ್ಕೊಮ್ಮೆ ಕಡ್ಡಾಯವಾಗಿ ಕಂತು ಕಟ್ಟಲೇ ಬೇಕಾದ ಅನಿವಾರ್ಯತೆ ಬೆಳೆ ನಾಶಕ್ಕೆ ಮುಂದಾಗಿಸಿದೆ. ಈ ಬೆಳೆಯ ಬದಲು ಅನ್ಯ ಬೆಳೆ ಬೆಳೆದಲ್ಲಿ ಲಾಭ ಕಾಣುವ ಲೆಕ್ಕಾಚಾರ ರೈತನದ್ದಾಗಿದ್ದು, ಹೂ ಬೆಳೆಗಾರರತ್ತ ಸರಕಾರ ನೋಡಿ ಸಣ್ಣಮಟ್ಟದ ಪರಿಹಾರವನ್ನಾದರೂ ನೀಡಲಿ ಎಂದು ಆಶಿಸಿದ್ದಾರೆ.