ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕುಕ್ಕರ್ ಐರನ್ ಬಾಕ್ಸ್ ಹಂಚಿಕೆ; ಕೊನೆಗೂ ಸ್ಪಷ್ಟನೆಕೊಟ್ಟ ಯತೀಂದ್ರ ಸಿದ್ದರಾಮಯ್ಯ!
ಮೈಸೂರು, (ಸೆಪ್ಟೆಂಬರ್ 22): ವಿಧಾನಸಭಾ ಚುನಾವಣೆಗೂ (Karnataka Assembly Elections 2023) ಮುನ್ನ ವರುಣಾ ಕ್ಷೇತ್ರದ ಮಡಿವಾಳ ಸಮುದಾಯದವರಿಗೆ ಐರನ್ ಬಾಕ್ಸ್ ಮತ್ತು ಕುಕ್ಕರ್‌ಗಳನ್ನು ಹಂಚಿರುವುದಾಗಿ ಯತೀಂದ್ರ ಸಿದ್ದರಾಮಯ್ಯ(yathindra siddaramaiah) ಹೇಳಿರುವ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಇದೀಗ ಈ ವಿವಾದ ಮೈಮೇಲೆ ಬರುತ್ತಿದ್ದಂತೆಯೇ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ವಿಡಿಯೋ ವೈರಲ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಕುಕ್ಕರ್, ಐರಾನ್ ಬಾಕ್ಸ್ ಯಾವಾಗ ಹಂಚಿಕೆ ಮಾಡಲಾಯ್ತು? ಏಕೆ ಹಂಚಿಕೆ ಮಾಡಲಾಗಿತ್ತು ಎನ್ನುವ ಬಗ್ಗೆ ವಿವರಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಗೋಸ್ಕರ ಸಿದ್ದರಾಮಯ್ಯನವರು ಕುಕ್ಕರ್ ಕೊಟ್ಟಿದ್ದಾರೆಂದು ಹೇಳಿಲ್ಲ. ಆದರೂ ಮಾತಾಡುವಾಗ ನಾನು ಸರಿಯಾಗಿ ಮಾತಾಡದೇ ಇರಬಹುದು. ನನ್ನ ಹೇಳಿಕೆ ಆ ರೀತಿಯ ಅರ್ಥವನ್ನು ಕೊಟ್ಟಿರಬಹುದು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಮೊದಲೇ ಈ ಘಟನೆ ನಡೆದಿದೆ. ನನ್ನ ತಂದೆ ಸ್ವತಃ ಕೈಯಿಂದ ಕುಕ್ಕರ್ ಹಾಗೂ ಐರನ್ ಬಾಕ್ಸ್ ಕೊಟ್ಟಿಲ್ಲ. ಇದರ ಬಗ್ಗೆ ನಾನು ಮಾತನಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ನನ್ನ ಹೇಳಿಕೆ ಆ ರೀತಿಯ ಅರ್ಥವನ್ನೂ ಕೊಟ್ಟಿರಬಹುದು. ಆದರೆ ಈ ಘಟನೆ ನಡೆದಿರುವುದು ಚುನಾವಣೆ ನೀತಿ ಸಂಹಿತೆಗೂ ಮುಂಚೆ. ಜನವರಿ 26 ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ವಿತರಣೆ ಮಾಡಲಾಗಿದೆ. ನನ್ನ ತಂದೆ ಸ್ವತಃ ಕೈಯಿಂದ ಕೂಡ ಕೊಟ್ಟಿಲ್ಲ. ಅದರ ಬಗ್ಗೆ ನಾನು ಮಾತನಾಡಿದ್ದು. ಆದರೆ ಮಾಧ್ಯಮದಲ್ಲಿ ಚುನಾವಣೆಗಾಗಿ ಹಂಚಿಕೆ ಮಾಡಲಾಗಿದೆ ಎಂದು ಬರುತ್ತಿದೆ. ಆ ಕಾರ್ಯಕ್ರಮದ ವೀಡಿಯೋ, ಪೋಟೋಗಳೂ ಇವೆ. ನಮ್ಮ ತಂದೆ ಅವರ ಕೈಯಿಂದ ದುಡ್ಡು ಕೊಟ್ಟು ಎಲ್ಲಿಯೂ ಹಂಚಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧದ ಚುನಾವಣಾ ತಕರಾರು ಅರ್ಜಿ: ವಿಚಾರಣೆ ಅ. 6ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 21: ಸಿಎಂ ಸಿದ್ದರಾಮಯ್ಯ (Siddaramaiah) ಶಾಸಕರಾಗಿ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಿದ್ದರಾಮಯ್ಯ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಸಲಾಗಿದ್ದು, ಇದು ಪ್ರಚಾರಕ್ಕಾಗಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ. ಅರ್ಜಿದಾರರು ಊಹೆಗಳ ಮೇಲೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದು, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಹೈಕೋರ್ಟ್ ಮುಂದೂಡಿದೆ.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳಿಂದ ಮತದಾರರಿಗೆ ಪ್ರಜಾಪ್ರತಿನಿಧಿ ಕಾಯ್ದೆ ಸೆ.123(1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಆದರೆ ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಆಯ್ಕೆ ಅಸಿಂಧುಗೊಳಿಸುವಂತೆ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವಲ್ಲಿ ಐದು ಗ್ಯಾರಂಟಿ ಯೋಜನೆಗಳು ನೆರವಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಐದು ಯೋಜನೆಗಳು ಜಾರಿ ಮಾಡುತ್ತೇವೆ ಎಂದು ಮತದಾರರನ್ನು ತಮ್ಮತ್ತ ಸೆಳೆಯಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹಿ ಹಾಕಿರುವ ಗ್ಯಾರಂಟಿ ಕಾರ್ಡ್ಗಳನ್ನು ಚುನಾವಣಾ ಪೂರ್ವದಲ್ಲಿ ರಾಜ್ಯಾದ್ಯಂತ ಹಂಚಲಾಗಿತ್ತು.
ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನೆ 123 (1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಶಾಸಕ ಸ್ಥಾನದ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅದರಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಪರ ವಕೀಲರಿಂದ ಇದಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದು ಪ್ರಚಾರಕ್ಕಾಗಿ ಮತ್ತು ಅರ್ಜಿದಾರರ ಊಹೆಗಳ ಮೇಲೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದು, ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 6ಕ್ಕೆ ಮುಂದೂಡಿದೆ.