ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿದ್ಯಾರ್ಥಿನಿಗೆ ಥಳಿಸಿ ಕೈಮುರಿದಿದ್ದ ಶಿಕ್ಷಕಿ ಅಮಾನತು!
ಕೋಲಾರ, (ಸೆಪ್ಟೆಂಬರ್ 20): ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ (School) ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿದ್ಯಾರ್ಥಿನಿಗೆ ಥಳಿಸಿದ್ದಕ್ಕೆ ಕೈಮುರಿದಿದ್ದ ಆರೋಪದಡಿಯಲ್ಲಿ ಮುಖ್ಯ ಮುಖ್ಯ ಶಿಕ್ಷಕಿ (Teacher) ಹೇಮಲತಾರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಈ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಮುಖ್ಯ ಶಿಕ್ಷಕಿಯೇ ಭರಿಸಬೇಕು ಎಂದು ಸೂಚಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಹೇಮಲತಾ ಅವರು, ಕಳೆದ ವಾರ ವಿದ್ಯಾರ್ಥಿನಿ ಭವ್ಯ ಶ್ರೀ ಎಂಬ ವಿದ್ಯಾರ್ಥಿನಿಗೆ ಥಳಿಸಿ ಎಡಗೈ ಮುರಿದಿದ್ದರು. ಈ ಸಂಬಂಧ ಪೋಷಕರು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಅಲ್ಲದೇ ಮುಖ್ಯ ಶಿಕ್ಷಕಿ ಹೇಮಲತಾರನ್ನ ಅಮಾನತು ಮಾಡುವಂತೆ ಪಟ್ಟು ಹಿಡಿದಿದ್ದರು.
ಬಳಿಕ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಶಾಲಾ ಮಕ್ಕಳ ಪೋಷಕರಿಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ಮುಖ್ಯ ಶಿಕ್ಷಕಿ ಹೇಮಲತಾ ಅವರನ್ನ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ನೀಡಿದ ವರದಿ ಆಧರಿಸಿ ಡಿಡಿಪಿಐ ಕೃಷ್ಣಮೂರ್ತಿ ಮುಖ್ಯ ಶಿಕ್ಷಕಿಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗೆ ಬಿಎಂಟಿಸಿ ಕಂಡಕ್ಟರ್ ಕಪಾಳ ಮೋಕ್ಷ, ಪ್ರಕರಣ ಫುಲ್ ಗೊಂದಲಮಯ
ಬೆಂಗಳೂರು, ಸೆ.20: ಕಳೆದ ವಾರ ಬಿಎಂಟಿಸಿ(BMTC) ಬಸ್ ಕಂಡಕ್ಟರ್ 11 ವರ್ಷದ ವಿದ್ಯಾರ್ಥಿಗೆ ಕಪಾಳಮೋಕ್ಷ(Assault) ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಂಡಕ್ಟರ್(Conductor) ನಿರಪರಾಧಿ ಎಂದು ಹೇಳಲಾದ ಸಿಸಿಟಿವಿ ದೃಶ್ಯಾವಳಿಗಳು ಬೇರೆ ಬಸ್ಸಿನ ಸಿಸಿಟಿವಿ ದೃಶ್ಯಗಳಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೆ.15ರಂದು ರಾಮಗೊಂಡನಹಳ್ಳಿ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಶಾಲೆ ಮುಗಿಸಿ ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದ. ತೂಬರಹಳ್ಳಿಗೆ ಹೋಗಲು ಟಿಕೆಟ್ ಪಡೆಯಲು ತಲಾ 10ರೂ. ನಂತೆ ಇಬ್ಬರು ವಿದ್ಯಾರ್ಥಿಗಳು ಕಂಡಕ್ಟರ್ಗೆ ದುಡ್ಡು ನೀಡಿದ್ದರು. ಆದರೆ ಕಂಡಕ್ಟರ್ ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ವಿದ್ಯಾರ್ಥಿ ಟಿಕೆಟ್ ಕೇಳಿದಾಗ ಕಂಡಕ್ಟರ್ ಮತ್ತೆ ಹಣ ಕೊಡುವಂತೆ ಕೇಳಿದ್ದಾರೆ. ಆಗ ವಿದ್ಯಾರ್ಥಿ ಹಣ ನೀಡಿರುವಾಗಿ ಹೇಳಿದಾಗ ವಾದ ಆಗಿ ಕಂಡಕ್ಟರ್, ವಿದ್ಯಾರ್ಥಿ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದರು.
ಇನ್ನು ಘಟನೆ ಸಂಬಂಧ ವೈಟ್‌ಫೀಲ್ಡ್ ರೈಸಿಂಗ್ ಎಂಬ ಸಿವಿಕ್ ಗ್ರೂಪ್ ಈ ವಿಚಾರವನ್ನು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿತ್ತು. ವಿಚಾರ ತಿಳಿಯುತ್ತಿದ್ದಂತೆ BMTC ಸೆಪ್ಟೆಂಬರ್ 16 ರಂದು ಬಸ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿತು. ಮತ್ತು ಕಂಡಕ್ಟರ್ ನಿರಪರಾಧಿ ಎಂದು ಹೇಳಿತ್ತು. ವಿದ್ಯಾರ್ಥಿಗಳು ಮೂಲ ಟಿಕೆಟ್ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಈಗ ತಿಳಿದುಬಂದಿದೆ.
ಮಂಗಳವಾರ, ವಿದ್ಯಾರ್ಥಿ, ಆತನ ತಾಯಿ ಮತ್ತು ಮೂವರು ಸ್ನೇಹಿತರು ಬಿಎಂಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಹಿರಿಯ ಅಧಿಕಾರಿಗಳು ಕಚೇರಿಗೆ ಬಂದವರಿಗೆ ಸಿಸಿಟಿವಿ ದೃಶ್ಯಾವಳಿ ಮತ್ತು ಬಸ್ ಕಂಡಕ್ಟರ್ ಅನ್ನು ತೋರಿಸಿ ಘಟನೆಯ ಕುರಿತು ಮರು ತನಿಖೆ ನಡೆಸಿದರು. ಈ ವೇಳೆ ವಿದ್ಯಾರ್ಥಿ ಇದು ಬೇರೆ ಕಂಡಕ್ಟರ್, ಸಿಸಿಟಿವಿ ದೃಶ್ಯಗಳು ಸಹ ಬೇರೆ ಬಸ್ಸಿನವು ಎಂದು ತಿಳಿಸಿದ್ದಾರೆ. ಹೀಗಾಗಿ ಮಕ್ಕಳು ಮೂಲ ಟಿಕೆಟ್ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಈಗ ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಲೆ ಬಿಎಂಟಿಸಿ ಗುರುತಿಸಿದ್ದ ಬಸ್ ಮತ್ತು ಕಂಡಕ್ಟರ್ ತಪ್ಪಾಗಿದೆ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ. ಹೀಗಾಗಿ ತನ್ನದೇ ಆದ ನೀತಿ ಸಂಹಿತೆಯ ಪ್ರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಾವು BMTC ಯನ್ನು ಒತ್ತಾಯಿಸುತ್ತೇವೆ ಎಂದು ವೈಟ್‌ಫೀಲ್ಡ್ ರೈಸಿಂಗ್ ಹೇಳಿದೆ. “
ನಾವು ಮಕ್ಕಳನ್ನು ಅನುಮಾನಿಸುವುದಿಲ್ಲ. ಸೆ.15ರ ಮಧ್ಯಾಹ್ನ 3.55ರಿಂದ 4.25ರವರೆಗೆ ಆ ಮಾರ್ಗದಲ್ಲಿ ಸಂಚರಿಸಿದ ಎಲ್ಲ ಬಸ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಎಂಟಿಸಿ ಪರಿಶೀಲಿಸುತ್ತಿದೆ. “ಆದರೆ ಇದು ಕಷ್ಟಕರವಾದ ಕೆಲಸ ಮತ್ತು ನಮಗೆ ಇನ್ನೊಂದೆರಡು ದಿನದ ಅವಶ್ಯಕತೆ ಇದೆ. ಕಂಡಕ್ಟರ್ ತಪ್ಪಿತಸ್ಥರೆಂದು ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಟಿಸಿಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ ಟಿ ಪ್ರಭಾಕರ ರೆಡ್ಡಿ ಅವರು ಭರವಸೆ ನೀಡಿದರು.