ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ – ಕೃಷ್ಣಭೈರೇಗೌಡ
ಬೆಂಗಳೂರು: ಕಳೆದ 5 ವರ್ಷಗಳಿಂದ ಪರಿಷ್ಕರಣೆ ಆಗದೇ ಇದ್ದ ಆಸ್ತಿ ನೋಂದಣಿ ಮಾರ್ಗಸೂಚಿ ದರವನ್ನ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅಕ್ಟೋಬರ್ 1 ರಿಂದಲೇ ಪರಿಷ್ಕೃತ ಮಾರ್ಗಸೂಚಿ ದರ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byregowda) ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಿರಲಿಲ್ಲ. ನಿಯಮದ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಹೆಚ್ಚಳ ಮಾಡಬೇಕು. ಹೀಗಾಗಿ ದರ ಹೆಚ್ವಳ ಮಾಡುತ್ತಿದ್ದೇವೆ. ಇಡೀ ರಾಜ್ಯಕ್ಕೆ ಒಂದೇ ರೀತಿಯಲ್ಲಿ ಮಾರ್ಗಸೂಚಿ ದರ ಹೆಚ್ಚಳ ಮಾಡುತ್ತಿಲ್ಲ. ಪ್ರದೇಶಗಳ ಅನುಗುಣವಾಗಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ದರ ಪರಿಷ್ಕರಣೆ ಆಗಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಅಲ್ಲಿ ದರ ಹೆಚ್ಚಳ ಆಗಲಿದೆ. ಹೈವೆ, ವಿಮಾನ ನಿಲ್ದಾಣ, ಐಟಿ-ಬಿಟಿ ಬಂದಿರೋ ಕಡೆಯೇ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಸರಾಸರಿ 25% ರಿಂದ 30% ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆ ಗಮನಿಸಿ ನಂತರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ಮಾರಾಟದ ವೇಳೆ ಬ್ಲ್ಯಾಕ್ ಮನಿ ಬಳಕೆ ಆಗುತ್ತಿದೆ. ಇದೆಲ್ಲವನ್ನೂ ತಡೆಯಬೇಕು. ಹೀಗಾಗಿ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದರಲ್ಲದೇ, ಮಾರ್ಗಸೂಚಿ ದರ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 2.5 ಸಾವಿರ ಕೋಟಿ ಹೆಚ್ಚು ರಾಜಸ್ವ ಸಂಗ್ರಹ ಆಗಲಿದೆ ಎಂದರು.
ಮಹಿಳಾ ಮೀಸಲಾತಿಯನ್ನ ಕಾಂಗ್ರೆಸ್ ಸ್ವಾಗತ ಮಾಡುತ್ತದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಡುವ ಬಿಲ್ ಮಂಡನೆ ಮಾಡಿರೋ ಕೇಂದ್ರ ಸರ್ಕಾರದ ನಿಲುವನ್ನ ಸ್ವಾಗತ ಮಾಡೋದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನ ಕಾಂಗ್ರೆಸ್ ಸ್ವಾಗತ ಮಾಡುತ್ತದೆ. ಮಹಿಳಾ ಮೀಸಲಾತಿ ತರಲು ಕಾಂಗ್ರೆಸ್ ಬಹಳ ಪ್ರಯತ್ನ ಮಾಡಿತ್ತು. ಹೀಗಾಗಿ ನಮ್ಮ ಸಂಪೂರ್ಣ ಬೆಂಬಲ ಬಿಲ್ಗೆ ಇದೆ ಎಂದರು.
ಪಂಚಾಯ್ತಿ ಲೆವೆಲ್ ನಲ್ಲಿ ನಾವು ಮಹಿಳೆಯರಿಗೆ 50% ಮೀಸಲಾತಿ ಜಾರಿ ಮಾಡಿದ್ವಿ. ಅಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ರಾಜಕೀಯ ಒತ್ತಡದಿಂದ ಲೋಕಸಭೆಯಲ್ಲಿ ಪಾಸ್ ಆಗಿರಲಿಲ್ಲ. ಈಗ ಮಂಡನೆ ಆಗಿರೋದು ಸ್ವಾಗತ ಅಂದರು.
9 ವರ್ಷ ಆದ ಮೇಲೆ ಮೋದಿ ಅವರು ಮಸೂದೆ ಜಾರಿ ಮಾಡ್ತಿದ್ದಾರೆ. ಮೊದಲ ಅವಧಿಯಲ್ಲೆ ಮೋದಿ ಅವರು ಬಿಲ್ ಜಾರಿ ಮಾಡಬಹುದಿತ್ತು. ಪೂರ್ಣ ಬಹುಮತ ಇದ್ದರು ಇದನ್ನ ಮಾಡಿರಲಿಲ್ಲ.ಈಗ ರಾಜಕೀಯ ಲಾಭ ತೆಗೆದುಕೊಳ್ಳಲು ಮಾಡ್ತಿದ್ದಾರೆ ಅನ್ನಿಸುತ್ತದೆ.ಆದರು ನಾವು ಮಹಿಳಾ ಮೀಸಲಾತಿಯನ್ನ ಸ್ವಾಗತ ಮಾಡ್ತೀವಿ.ಕಾಂಗ್ರೆಸ್ ಕೂಡಾ ಇದಕ್ಕೆ ಬೆಂಬಲ ಕೊಡುತ್ತದೆ.ಕೇಂದ್ರದ ನಿರ್ಧಾರವನ್ನ ಸ್ವಾಗತ ಮಾಡ್ತೀವಿ ಎಂದರು.