ಚೈತ್ರ ಕುಂದಾಪುರ ವಂಚನೆ ಪ್ರಕರಣ: 101 ಈಡುಗಾಯಿ ಹೊಡೆದ ಮಲೆನಾಡಿಗರು..!

ಚಿಕ್ಕಮಗಳೂರು: ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaithra Kundapura), ಸಿಸಿಬಿ (CCB) ಪೊಲೀಸರ ಅತಿಥಿಯಾಗಿರುವುದಕ್ಕೆ ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿಯ ಮಾವಿನಕಟ್ಟೆ ಗ್ರಾಮದ ಜನರು ಆನೆ ವಿಘ್ನೇಶ್ವರ ಹಾಗೂ ಬ್ರಹ್ಮ ಜಟಿಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, 101 ಈಡುಗಾಗಿ ಹೊಡೆದು ಸಂಭ್ರಮಿಸಿದ್ದಾರೆ.
ಕಳೆದ ಅಕ್ಟೋಬರ್ 4 ರಂದು ಮಾವಿನಕಟ್ಟೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಹಿಂದೂಗಳ ಮನಸ್ಸಿಗೆ ನೋವಾಗುವಂತಹ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ ಭಾಷಣಕ್ಕೆ ಸ್ಥಳೀಯರೇ ಬೇಸರ ವ್ಯಕ್ತಪಡಿಸಿದ್ದರು. ಸಹಬಾಳ್ವೆಯಿಂದಿದ್ದ ಗ್ರಾಮಕ್ಕೆ ಕಾಲಿಟ್ಟು ಶಾಂತಿ ಕದಡುವ ಕೆಲಸ ಮಾಡಿದ್ದರು. ಹಿಂದೂಗಳ ವಿರುದ್ಧ ಹಿಂದೂಗಳನ್ನೇ ಎತ್ತಿಕಟ್ಟುವ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಅಂದು ಊರಿನ ಜನ ಆನೆ ವಿಘ್ನೇಶ್ವರ ಹಾಗೂ ಬ್ರಹ್ಮ ಜಟಿಗೇಶ್ವರ ಸ್ವಾಮಿಗೆ, ಈ ವರ್ಷದೊಳಗೆ ಶಿಕ್ಷೆ ನೀಡು ಎಂದು ಬೇಡಿಕೊಂಡಿದ್ದರು. ಅದರಂತೆ ಈಗ ಬಿಜೆಪಿ ಟಿಕೆಟ್ ವಿಚಾರದ ವಂಚನೆ ಪ್ರಕರಣದಲ್ಲಿ ಚೈತ್ರ ಲಾಕ್ ಆಗಿರುವುದರಿಂದ ಸಂತಸ ವ್ಯಕ್ತಪಡಿಸಿರುವ ಮಾವಿನಕಟ್ಟೆ ಗ್ರಾಮದ ಜನ ಆಕೆ ಕಾಲಿಟ್ಟ ಜಾಗವನ್ನು ಶುದ್ಧೀಕರಣ ಮಾಡಿದ್ದಾರೆ.
ಆನೆ ವಿಘ್ನೇಶ್ವರ ಸ್ವಾಮಿ ಹಾಗೂ ಬ್ರಹ್ಮ ಜಟಿಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಆಕೆ ಭಾಷಣ ಮಾಡಿದ ಜಾಗಕ್ಕೆ ತೀರ್ಥ ಹಾಕಿ ಶುದ್ಧ ಮಾಡಿದ್ದಾರೆ. ಜೊತೆಗೆ ಆಕೆ ಭಾಷಣ ಮಾಡಿದ ಜಾಗದಲ್ಲೇ 101 ತೆಂಗಿನಕಾಯಿ ಹೊಡೆದು ಸಂತಸಪಟ್ಟಿದ್ದಾರೆ.
ಸದ್ಯಕ್ಕೆ ಚೈತ್ರಾ ಕುಂದಾಪುರ, ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿನಿಮಾ ಕಥೆಗೂ ಮೀರಿ ಗೋವಿಂದ ಬಾಬುರನ್ನು ಯಾಮಾರಿಸಲು ವಿಭಿನ್ನ ಕಥೆ ಎಣೆದಿದ್ದ ಚೈತ್ರಾ ಮತ್ತು ಆಕೆಯ ತಂಡದ ಒಂದೊಂದು ಕಥೆ ಹೊರಬರುತ್ತಿದ್ದು, ಚೈತ್ರಾಳ ಕಥೆ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ.