2000 ರಲ್ಲಿ ಶ್ರೀಲಂಕಾ ವಿರುದ್ಧ 54 ರನ್ ಗೆ ಆಲೌಟ್ ಆಗಿದ್ದ ಭಾರತ ಇಂದು 8ನೇ ಬಾರಿ ಏಷ್ಯಾಕಪ್ ಚಾಂಪಿಯನ್ ..!
ಅಕ್ಟೋಬರ್ 29, 2000…ಶಾರ್ಜಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನತ್ ಜಯಸೂರ್ಯ ನಾಯಕತ್ವದ ಶ್ರೀಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 299 ರನ್ ಕಲೆಹಾಕಿತು.
ಇತ್ತ 300 ರನ್ಗಳ ಗುರಿ ಪಡೆದ ಸೌರವ್ ಗಂಗೂಲಿ ಮುಂದಾಳತ್ವದ ಟೀಮ್ ಇಂಡಿಯಾ 26.3 ಓವರ್ಗಳಲ್ಲಿ ಕೇವಲ 54 ರನ್ಗಳಿಗೆ ಆಲೌಟ್ ಆಯಿತು. ಇದು ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಅಂದರೆ ಟೀಮ್ ಇಂಡಿಯಾ 1981 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 63 ರನ್ಗಳಿಗೆ ಆಲೌಟ್ ಆಗಿದ್ದ ಭಾರತ ತಂಡವು ಆ ಬಳಿಕ ಅತ್ಯಲ್ಪ ಮೊತ್ತಕ್ಕೆ ಸರ್ವಪತನ ಕಂಡಿರಲಿಲ್ಲ. ಆದರೆ ಶ್ರೀಲಂಕಾ ತಂಡವು ಕೇವಲ 54 ರನ್ಗಳಿಗೆ ಆಲೌಟ್ ಮಾಡಿದ್ದರು.
ಈ ಅವಮಾನಕ್ಕೆ ಇದೀಗ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿದೆ. ಅದು ಕೂಡ ಫೈನಲ್ ಪಂದ್ಯದಲ್ಲೇ ಎಂಬುದೇ ಇಲ್ಲಿ ವಿಶೇಷ. ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲೌಟ್ ಮಾಡಿ, 23 ವರ್ಷಗಳ ಹಿಂದೆ ಅವಮಾನಕ್ಕೊಳಗಾಗಿದ್ದ ಟೀಮ್ ಇಂಡಿಯಾ ಲೆಕ್ಕ ಚುಕ್ತಾ ಮಾಡಿಕೊಂಡಿದೆ.
ವಿಶೇಷ ಎಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್. ಅಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಮೂಡಿ ಬಂದ ಅತೀ ಕಡಿಮೆ ಮೊತ್ತ. ಇದರೊಂದಿಗೆ 23 ವರ್ಷಗಳ ಹಿಂದೆ ಟೀಮ್ ಇಂಡಿಯಾವನ್ನು ಅತ್ಯಲ್ಪ ಮೊತ್ತಕ್ಕೆ ಆಲೌಟ್ ಮಾಡಿ ಇತಿಹಾಸ ನಿರ್ಮಿಸಿದ್ದ ಲಂಕಾ ವಿರುದ್ಧ ಭಾರತ ತಂಡವು ಹೊಸ ಇತಿಹಾಸ ಬರೆದಿದೆ.
000ರಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿದ್ದ ಟೀಮ್ ಇಂಡಿಯಾ ಪ್ಲೇಯಿಂಗ್: ಸೌರವ್ ಗಂಗೂಲಿ (ನಾಯಕ), ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವಿನೋದ್ ಕಾಂಬ್ಳಿ, ಹೇಮಾಂಗ್ ಬದಾನಿ, ರಾಬಿನ್ ಸಿಂಗ್, ವಿಜಯ್ ದಹಿಯಾ, ಸುನಿಲ್ ಜೋಶಿ, ಅಜಿತ್ ಅಗರ್ಕರ್, ಝಹೀರ್ ಖಾನ್, ವೆಂಕಟೇಶ್ ಪ್ರಸಾದ್.
2023 ರಲ್ಲಿ ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
2000ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಪರ ಚಾಮಿಂಡ ವಾಸ್ 9.3 ಓವರ್ಗಳಲ್ಲಿ 14 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಬಾರಿಯ ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ 7 ಓವರ್ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ಸ್:
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಟೀಮ್ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿತು. ಮೊದಲ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ 4ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ ಮತ್ತೆರಡು ವಿಕೆಟ್ ಉರುಳಿಸಿ ಸಿರಾಜ್ ಐದು ವಿಕೆಟ್ಗಳ ಸಾಧನೆ ಮಾಡಿದರು. ಇನ್ನು ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು. ಇದರೊಂದಿಗೆ ಶ್ರೀಲಂಕಾ ತಂಡವು 15.2 ಓವರ್ಗಳಲ್ಲಿ 50 ರನ್ಗಳಿಗೆ ಆಲೌಟ್ ಆಯಿತು.
ಕೇವಲ 51 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ 4 ಓವರ್ಗಳಲ್ಲೇ 34 ರನ್ ಚಚ್ಚಿದ ಈ ಜೋಡಿ ಪವರ್ಪ್ಲೇನಲ್ಲೇ ತಂಡಕ್ಕೆ ಗೆಲುವು ತಂದುಕೊಡುವ ಕಾಯಕಕ್ಕೆ ಕೈಹಾಕಿದರು. ಅಂತಿಮವಾಗಿ 6.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ 8ನೇ ಬಾರಿ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ.