ದಕ್ಷಿಣ ಕನ್ನಡದಲ್ಲಿ ಹರಡುತ್ತಿರುವ ದಡಾರ ಪ್ರಕರಣಗಳು ; ಯುವಕರಲ್ಲೂ ಹೆಚ್ಚಾದ ಸೋಂಕು ಪರಿಣಾಮ!
ಮಂಗಳೂರು, ಸೆ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ (Measles) ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಸುಮಾರು 150 ಪ್ರಕರಣಗಳು ದಾಖಲಾಗಿವೆ. ಎರಡನೇ ಹಂತದ ಮಿಷನ್ ಇಂದ್ರಧನುಷ್ ಮೂಲಕ ರೋಗ ಹರಡುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ.
ದಡಾರವು ಮಕ್ಕಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ಭಾವಿಸಲಾಗಿದೆ. ಆದರೆ, ಈ ವರ್ಷ ಯುವಕರ ಮೇಲೂ ಪರಿಣಾಮ ಬೀರಿದೆ. ಜೊತೆಗೆ, ಹರಡುವಿಕೆಯ ವೇಗವು ಕೋವಿಡ್ಗಿಂತ ವೇಗವಾಗಿರುತ್ತದೆ. ಇದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ದಡಾರದಿಂದ 81 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವರ್ಷದ ಸೆಪ್ಟೆಂಬರ್ ಮೊದಲ ವಾರದ ಅಂಕಿಅಂಶಗಳ ಪ್ರಕಾರ, 299 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು 141 ದಡಾರ ಪ್ರಕರಣಗಳು ದೃಢಪಟ್ಟಿವೆ. ಎಂಟು ರುಬೆಲ್ಲಾ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಮಂಗಳೂರಿನಲ್ಲಿ 40 ಮಂದಿಯಲ್ಲಿ ಇಬ್ಬರಿಗೆ ದಡಾರ ಸೋಂಕು ತಗುಲಿತ್ತು. ಈ ವರ್ಷ 176 ಪ್ರಕರಣಗಳಲ್ಲಿ 76 ದಡಾರ ಪ್ರಕರಣಗಳು ದೃಢಪಟ್ಟಿವೆ.
ದಡಾರ ಪೀಡಿತರಲ್ಲಿ 10 ತಿಂಗಳ ಮಗು ಹಾಗೂ 33 ವರ್ಷದ ಯುವಕರೂ ಸೇರಿದ್ದಾರೆ. ದಡಾರದ ರಕ್ತ ಪರೀಕ್ಷೆಯನ್ನು ಕರ್ನಾಟಕದಲ್ಲಿ ಎರಡು ಸ್ಥಳಗಳಲ್ಲಿ ಮಾತ್ರ ಕೈಗೊಳ್ಳಲಾಗುತ್ತದೆ. ಹೀಗಾಗಿ ಪರೀಕ್ಷಾ ವರದಿ ಬರಲು ವಿಳಂಬವಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಮಾತನಾಡಿ, ದಡಾರ ಪ್ರಕರಣಗಳು ಹೆಚ್ಚುತ್ತಿವೆ. ಲಸಿಕೆ ತೆಗೆದುಕೊಳ್ಳಲು ಮಾಡುತ್ತಿಉರವ ಸೋಮಾರಿತನವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ನಾವು ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಆದಾಗ್ಯೂ, ಅನೇಕರು ಒಂದನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಎರಡನೇ ಡೋಸ್ ತೆಗೆದುಕೊಳ್ಳಲು ವಿಳಂಬ ಮಾಡುತ್ತಾರೆ. ಹೀಗಾಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ನಾವು ಲಸಿಕೆ ಅಭಿಯಾನವನ್ನೂ ನಡೆಸುತ್ತಿದ್ದೇವೆ ಎಂದರು.