ಕೊಹ್ಲಿ ಮತ್ತು ರಾಹುಲ್ ಭರ್ಜರಿ ಜೊತೆಯಾಟ ; ಪಾಕಿಸ್ತಾನಕ್ಕೆ 357 ರನ್ ಗಳ ಟಾರ್ಗೆಟ್!
ಕೊಲಂಬೊ: ಮಳೆ ಕಾಟದ ಹೊರತಾಗಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ (Team India) ಎದುರಾಳಿ ಪಾಕಿಸ್ತಾನ ತಂಡಕ್ಕೆ 357 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ. 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ ಭಾರತ, ಪಾಕಿಸ್ತಾನಕ್ಕೆ 357 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ (Pakistan), ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ (Team India) ಬಿಟ್ಟುಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ ರೋಹಿತ್ ಮತ್ತು ಗಿಲ್ ಜೋಡಿ 16.4 ಓವರ್‌ಗಳಲ್ಲಿ 121 ರನ್ ಬಾರಿಸಿತ್ತು. ರೋಹಿತ್ ಶರ್ಮಾ 49 ಎಸೆತಗಳಲ್ಲಿ 56 ರನ್ (6 ಬೌಂಡರಿ, 4 ಸಿಕ್ಸರ್) ಚಚ್ಚಿ ಔಟಾದರು. ಈ ಬೆನ್ನಲ್ಲೇ 52 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದ ಶುಭಮನ್ ಗಿಲ್ ಸಹ ವಿಕೆಟ್ ಕೈಚೆಲ್ಲಿದ್ದರು.
Fastest to 13000 ODI runs.
— BCCI (@BCCI) September 11, 2023
Take a bow, @imVkohli ??#TeamIndia pic.twitter.com/UOT6HsJRB2
ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 8 ರನ್ ಗಳಿಸಿದ್ದರೆ, ಕೆ.ಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಆದ್ರೆ ಭಾನುವಾರ ಪದ್ಯಕ್ಕೆ ಮಳೆ ಅಡ್ಡಿಯಾದ್ದರಿಂದ ಸೋಮವಾರ ಪಂದ್ಯವನ್ನು ಮುಂದುವರಿಸಲಾಯಿತು. ಇಂದು ಕ್ರೀಸ್ ಮುಂದುವರಿಸಿದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಜೋಡಿ ಪಾಕ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿತು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 194 ಎಸೆತಗಳಲ್ಲಿ ಬರೋಬ್ಬರಿ 233 ರನ್ ಕಲೆಹಾಕಿತು.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 129.78 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 122 ರನ್ (9 ಬೌಂಡರಿ, 3 ಸಿಕ್ಸರ್) ಚಚ್ಚಿದರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 104.71 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ 106 ಎಸೆತಗಳಲ್ಲಿ 111 ರನ್ (12 ಬೌಂಡರಿ, 2 ಸಿಕ್ಸರ್) ಬಾರಿಸುವ ಮೂಲಕ ತಂಡದ ಮೊತ್ತವನ್ನ 350ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
25 ಓವರ್‌ಗಳಲ್ಲಿ 150 ರನ್‌ಗಳಿಸಿದ್ದ ಟೀಂ ಇಂಡಿಯಾ ಬಳಿಕ 30 ಓವರ್ ಕಳೆದರೂ 200ರ ಗಡಿದಾಟುವಲ್ಲಿ ವಿಫಲವಾಗಿತ್ತು. ಈ ವೇಳೆ ಕೊಹ್ಲಿ ಹಾಗೂ ರಾಹುಲ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಬಳಿಕ ಸ್ಫೋಟಕ ಇನ್ನಿಂಗ್ಸ್ ಶುರು ಮಾಡಿದ ಕಿಂಗ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಕೊನೆಯವರೆಗೂ ವಿಕೆಟ್ ಬಿಟ್ಟುಕೊಡದೇ ಪಾಕ್ ಬೌಲರ್‌ಗಳನ್ನ ಬೆಂಡೆತ್ತಿದರು.
ಮೆರೆದಾಡಿದ ಕೊಹ್ಲಿ: ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 13,000 ಸಾವಿರ ರನ್ ಗಳಿಸಿದ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಿಡಿಸುವ ಮೂಲಕ ಅತಿಹೆಚ್ಚು ಶತಕಗಳನ್ನು ಸಿಡಿಸಿದ ವಿಶ್ವದ ಹಾಗೂ ಭಾರತದ 2ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಿದ ಕೆ.ಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದರು.