ಮಳೆ ಕಾಟ: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಮೀಸಲು ದಿನ ಸೋಮವಾರಕ್ಕೆ ಮುಂದೂಡಿಕೆ
India-Pakistan: ಭಾರತ-ಪಾಕಿಸ್ತಾನ್ (India-Pakistan) ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಇಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
ಶಾಹೀನ್ ಅಫ್ರಿದಿಯ ಮೊದಲ ಓವರ್ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ರನ್ ಖಾತೆ ತೆರೆದ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮತ್ತೊಂದೆಡೆ ಯುವ ದಾಂಡಿಗ ಶುಭ್ಮನ್ ಗಿಲ್ ಕೂಡ ಭರ್ಜರಿಯಾಗಿ ಬ್ಯಾಟ್ ಬೀಸಿದರು.
ಪರಿಣಾಮ ಗಿಲ್ ಬ್ಯಾಟ್ನಿಂದ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂದರೆ, ರೋಹಿತ್ ಶರ್ಮಾ 42 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಲ್ಲದೆ 16.3 ಓವರ್ಗಳಲ್ಲಿ 121 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ ಶಾದಾಬ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ರೋಹಿತ್ ಶರ್ಮಾ (56 ರನ್, 49ಎಸೆತ, 4 ಸಿಕ್ಸ್, 6 ಫೋರ್) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 52 ಎಸೆತಗಳಲ್ಲಿ 10 ಫೋರ್ಗಳೊಂದಿಗೆ 58 ರನ್ಗಳಿಸಿದ್ದ ಶುಭ್ಮನ್ ಗಿಲ್ ಶಾಹೀನ್ ಅಫ್ರಿದಿ ಎಸೆತದಲ್ಲಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಂಡದ ಮೊತ್ತಕ್ಕೆ 24 ರನ್ ಸೇರಿಸಿದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ಹಂತದಲ್ಲಿ ಟೀಮ್ ಇಂಡಿಯಾ 24.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತ್ತು. ಇದೀಗ ಮಳೆಯ ಕಾರಣ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಸೋಮವಾರ ಉಭಯ ತಂಡಗಳು 50 ಓವರ್ಗಳ ಪಂದ್ಯವನ್ನಾಡಲಿದೆ. ಆದರೆ ಈಗಾಗಲೇ 24.1 ಓವರ್ಗಳನ್ನು ಆಡಿರುವ ಟೀಮ್ ಇಂಡಿಯಾ ಉಳಿದ ಓವರ್ಗಳನ್ನು ಆಡಲಿದೆ. ಅಂದರೆ ಭಾನುವಾರ ಪಂದ್ಯವು ಎಲ್ಲಿ ಕೊನೆಗೊಂಡಿತ್ತೊ ಅಲ್ಲಿಂದಲೇ ಮ್ಯಾಚ್ ಶುರುವಾಗಲಿದೆ. ಅಂದರೆ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.