ಉಡುಪಿ ಕೃಷ್ಣ ಮಠಕ್ಕೆ ಸ್ಪೀಕರ್ ಖಾದರ್ ಭೇಟಿ : ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿ
ಭಗವಾನ್ ಶ್ರೀಕೃಷ್ಣ ಮಥುರಾದಲ್ಲಿ ಮಧ್ಯರಾತ್ರಿ ಜನಿಸಿದ್ದು ಇತಿಹಾಸ. ಅದೇ ಮಧ್ಯರಾತ್ರಿಯ ಸಮಯ, ಅದೇ ಗಳಿಗೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಶಾಸಕರೊಬ್ಬರು ದೈವ ಸಂಕಲ್ಪ ಎಂಬಂತೆ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉಡುಪಿ ಮಠಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದ ಶಾಸಕ.
ಮಠದ ಸತ್ಯನಾರಾಯಣ ಭಟ್ ಅವರು ಸ್ಪೀಕರ್ ಅವರನ್ನು ಬರಮಾಡಿಕೊಂಡರು. ಮಠದ ಕೊಳದಲ್ಲಿ ಕೈ ಕಾಲು ತೊಳೆದು ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ಅವರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿದರು. ಪ್ರಸಾದವನ್ನು ನೀಡಿ ಹರಸಿದರು.
ಬುಧವಾರ ಬೆಳಿಗ್ಗೆ ಬೆಂಗಳೂರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದು ತನ್ನ ಕ್ಷೇತ್ರದಲ್ಲಿ ವಿವಿಧೆಡೆ ಕೃಷ್ಣಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಉಡುಪಿಯ ಕಡಿಯಾಲಿನಲ್ಲಿ ಪ್ರಸಾದ್ ಕಾಂಚನ್ ನೇತೃತ್ವದಲ್ಲಿ ಶಶಿರಾಜ್ ಕುಂದರ್ ಮತ್ತು ತಂಡದಿಂದ ಟೈಗರ್ ಫ್ರೆಂಡ್ಸ್ ನ ಹುಲಿವೇಷ ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಹಿತೈಷಿಗಳ ಕೋರಿಕೆ ಮೇರೆಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಈ ಭಾಗ್ಯ ಎಲ್ಲರಿಗೂ ಪ್ರಾಪ್ತವಾಗದು. ಎರಡೂ ಜಿಲ್ಲೆಯ 13 ಶಾಸಕರ ಪೈಕಿ 11 ಮಂದಿ ಬಿಜೆಪಿ ಶಾಸಕರಿದ್ದರೂ ಅವರ್ಯಾರಿಗೂ ಸಿಗದ ಭಾಗ್ಯ ಸ್ಪೀಕರ್ ಖಾದರ್ ಗೆ ಲಭಿಸಿದ್ದು ಕಾಕತಾಳೀಯ. ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸುವ ಸೌಹಾರ್ದದ ಯು.ಟಿ.ಖಾದರ್ ಗೆ ಇಂತಹ ವಿಶೇಷ ಸಿಕ್ಕಿದ್ದು ಅವರ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಎಂದು ಖಾದರ್ ಅಭಿಮಾನಿಗಳು ಸಂತಸಪಟ್ಟರು.
6 ಗಂಟೆಗೆ ಹುಲಿವೇಷ ಸ್ಪರ್ಧೆ ನಿಗದಿಯಾಗಿದ್ದರೂ ಆ ಸಮಯಕ್ಕೆ ಯು.ಟಿ. ಖಾದರ್ ಕ್ಷೇತ್ರದಲ್ಲೇ ಬಿಝಿಯಾಗಿದ್ದರು. ಸಂಘಟಕರ ಒತ್ತಾಯದ ಮೇರೆಗೆ ಉಡುಪಿ ಹುಲಿವೇಷ ಸ್ಪರ್ಧೆಗೆ ರಾತ್ರಿ ಭೇಟಿಯಿತ್ತರು. ಹಿಂತಿರುಗುವಾಗ ಶ್ರೀಕೃಷ್ಣ ಮಠ ಭೇಟಿಯ ಕಲ್ಪನೆಯೂ ಇರಲಿಲ್ಲ. ದೈವಕೃಪೆ ಇದು” ಎಂದು ಅಲ್ಲಿಗೆ ಬಂದಿರುವ ಬೇರೆ ಬೇರೆ ಜಿಲ್ಲೆಯ ಭಕ್ತಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಪೀಕರ್ ಅವರೊಂದಿಗೆ ಕೌನ್ಸಿಲರ್ ಭಾಸ್ಕರ ರಾವ್ ಕಿದಿಯೂರ್, ರಮೇಶ್ ಕಾಂಚನ್, ಮುನಿಯಾಲ ಉದಯಕುಮಾರ್ ಶೆಟ್ಟಿ, ಮುಸ್ತಫ ಹರೇಕಳ, ಬದ್ರುದ್ದೀನ್ ಜೊತೆಗಿದ್ದರು.