ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಕೀವ್: ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ (Oleksii Reznik) ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodimir Zelensky) ಆದೇಶ ಹೊರಡಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ (Russia) ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್‌ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಉಕ್ರೇನ್‌ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್‌ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್‌ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ರೆಜ್ನಿಕೋವ್ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.
ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?
ಸಿಂಗಾಪುರ: ಸಿಂಗಾಪುರದ (Singapore) ನೂತನ ಅಧ್ಯಕ್ಷರಾಗಿ (President) ಆಯ್ಕೆಯಾಗಿರುವ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ (Tharman Shanmugaratnam) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಭಾರತ ಹಾಗೂ ಸಿಂಗಾಪುರ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತೇವೆ ಎಂದಿದ್ದಾರೆ.
ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಥರ್ಮನ್ ಷಣ್ಮುಗರತ್ನಂ ಭರ್ಜರಿ ಗೆಲುವು ಸಾಧಿಸಿ ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಷಣ್ಮುಗರತ್ನಂ ಯಾರು?
ತಮಿಳುನಾಡು ಮೂಲದ ತಂದೆ ಹಾಗೂ ಚೀನಾ ಮೂಲದ ತಾಯಿಗೆ ಥರ್ಮನ್ ಷಣ್ಮುಗರತ್ನಂ 1957ರ ಫೆಬ್ರವರಿ 25ರಂದು ಸಿಂಗಾಪುರದಲ್ಲಿ ಜನಿಸಿದರು. ಅವರ ತಂದೆ ಕನಕರತ್ನಂ ಷಣ್ಮುಗರತ್ನಂ ಅವರು ಹೆಸರಾಂತ ರೋಗಶಾಸ್ತ್ರಜ್ಞ ಹಾಗೂ ಕ್ಯಾನ್ಸರ್ ಸಂಶೋಧಕರು. ತಾಯಿ ಗೃಹಿಣಿಯಾಗಿದ್ದರು.
ಥರ್ಮನ್ ಅವರು ಆಂಗ್ಲೋ-ಚೈನೀಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವುಲ್ಫ್‌ಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪೂರ್ಣಗೊಳಿಸಿದರು.
ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಮಾಸ್ಟರ್ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಪೂರ್ಣಗೊಳಿಸಿದರು. ಶಾಲಾ ಜೀವನದಲ್ಲಿ ಅವರು ಸಕ್ರಿಯ ಕ್ರೀಡಾಪಟುವಾಗಿದ್ದರು.
ವೃತ್ತಿಯಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದು, ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಸೇವಾ ಪಾತ್ರಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಕಳೆದಿದ್ದಾರೆ. ಅವರು ವಿವಿಧ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಮಂಡಳಿಗಳು ಮತ್ತು ಪ್ಯಾನೆಲ್‌ಗಳನ್ನು ಸಹ ಮುನ್ನಡೆಸಿದ್ದಾರೆ. 2011-2023 ರಲ್ಲಿ ವಾಸ್ತವಿಕ ಕೇಂದ್ರ ಬ್ಯಾಂಕ್ ಸಿಂಗಾಪುರದ ಹಣಕಾಸು ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2019-2023 ರ ನಡುವೆ ಸಿಂಗಾಪುರ ಹೂಡಿಕೆ ನಿಗಮದ ಉಪಾಧ್ಯಕ್ಷರಾಗಿದ್ದರು.