ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುಪಿಐ ಪಾವತಿ ವಿಧಾನ ಪರಿಚಯಿಸುವ ಸಾಧ್ಯತೆ!
ಬೆಂಗಳೂರು, ಸೆ.03: ಪ್ರಯಾಣಿಕರಿಗೆ ಸಹಾಯವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) UPI ಆಧಾರಿತ ಪಾವತಿಗಳನ್ನು ಪರಿಚಯಿಸಲು ಮುಂದಾಗಿದೆ. 5ಜಿ ಯುಗದಲ್ಲಿ ಪಾರ್ಸ್ನಲ್ಲಿ ಹಣ ಇಟ್ಟುಕೊಂಡು ಓಡಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಕೆಎಸ್‌ಆರ್‌ಟಿಸಿ ಹೊಸ ಪ್ರಯೋಗಕ್ಕಿಳಿದಿದೆ. ಇನ್ಮುಂದೆ ಕರ್ನಾಟಕದ ಸರ್ಕಾರಿ ಬಸ್ಗಳಲ್ಲಿ UPI ಬಳಸಿ ಟಿಕೆಟ್ ಖರೀದಿಸಬಹುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC)ದಲ್ಲಿ ಯುಪಿಐ ಆಧಾರಿತ ಪಾವತಿಯ ಪ್ರಾಯೋಗಿಕ ಹಂತ ನಡೆಯುತ್ತಿದೆ. ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಚಿಲ್ಲರೆ ಸಮಸ್ಯೆ ಹಾಗೂ ಹಾರ್ಡ್ ಕ್ಯಾಶ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಗೊಂದಲ ಅಥವಾ ತೊಂದರೆ-ಮುಕ್ತ ಅನುಭವ ನೀಡಲು NWKRTC ಯುಪಿಐ ಪೇಮೆಂಟ್ಗೆ ಚಾಲನೆ ಕೊಟ್ಟಿದೆ. ಇನ್ನು ಎಲ್ಲಾ KSRTC ಬಸ್‌ಗಳಲ್ಲಿಯೂ ಯುಪಿಐ ಆಧಾರಿತ ಪಾವತಿಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ. NWKRTC ಪ್ರಾಯೋಗಿಕ ಹಂತದಲ್ಲಿ ಎದುರಾಗುವ ಗೊಂದಲ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ರಸ್ತೆ ಸಾರಿಗೆಗಳಲ್ಲಿ ಯುಪಿಐ ಪೇಮೆಂಟ್ ಅಳವಡಿಸಲು ಸಿದ್ಧತೆ ನಡೆದಿದೆ.
NWKRTCಯಲ್ಲಿ ಶುಕ್ರವಾರ ಪ್ರಾರಂಭಿಸಲಾದ ಪ್ರಾಯೋಗಿಕ ಚಾಲನೆಯಲ್ಲಿ, ಪ್ರಯಾಣಿಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಹಣವನ್ನು ಪಾವತಿಸುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಅನೇಕ ಪ್ರಯಾಣಿಕರು ಬಸ್ಗಳಲ್ಲಿ ಆನ್ಲೈಲ್ ಪೇಮೆಂಟ್ ಸೇವೆ ಪರಿಚಯಿಸಲು ಬಸ್ ನಿಗಮಗಳಿಗೆ ಡಿಮ್ಯಾಂಡ್ ಮಾಡಿದ್ದರು. ಕಳಪೆ ಇಂಟರ್ನೆಟ್ ಸಂಪರ್ಕ ಮತ್ತು ಇತರ ತಾಂತ್ರಿಕ ದೋಷಗಳಿಂದ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸದ್ಯ ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಪರ್ಸ್ನಲ್ಲಿ ಹಾರ್ಡ್ ಕ್ಯಾಶ್ ಇಲ್ಲದ ಕಾರಣ ಟಿಕೆಟ್ ಖರೀದಿಸಿಲ್ಲ ಎಂದು ಬಸ್ ಹತ್ತಿದ್ದ ಪ್ರಯಾಣಿಕರನ್ನು ರಸ್ತೆ ಮಧ್ಯೆಯೇ ಇಳಿಸಿ ಹೋದ ನಿದರ್ಶನಗಳು ಅನೇಕ. ತಳ್ಳುಗಾಡಿ, ತರಕಾರಿ ಮಾರಾಟಗಾರರು ಅಥವಾ ರಸ್ತೆಬದಿಯ ಪಾನಿ ಪುರಿ ಅಂಗಡಿಯವನ ಬಳಿಯೂ ಫೋನ್ ಪೇ, ಗೂಗಲ್ ಪೇ ಇರುತ್ತೆ. ಆದ್ರೆ ಸರ್ಕಾರಿ ಬಸ್ಗಳಲ್ಲಿ ಮಾತ್ರ ಈ ಸೌಲಭ್ಯವಿರಲಿಲ್ಲ. ಸದ್ಯ ಈಗ ಈ ಬಗ್ಗೆ ಸಾರಿಗೆ ನಿಗಮ ತಲೆ ಕೆಡಿಸಿಕೊಂಡಿದ್ದು ಪ್ರಯೋಗಿಕ ಹಂತವನ್ನು ಆರಂಭಿಸಿದೆ.