ಮುಖ್ಯಮಂತ್ರಿಯವರ ಅನುಮತಿ ಇದ್ದರೆ ಮಾತ್ರ ವರ್ಗ!
ಬೆಂಗಳೂರು: ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಮಾಡುವುದಾದರೆ ಮುಖ್ಯಮಂತ್ರಿಯವರ ಪೂರ್ವಾನು ಮೋದನೆ ಪಡೆಯುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ.
ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಅಪರ ಕಾರ್ಯದರ್ಶಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ಒಂದು ವೇಳೆ ಮುಖ್ಯಮಂತ್ರಿಯವರ ಪೂರ್ವಾನುಮತಿ ಪಡೆಯದೆ ವರ್ಗಾವಣೆ ಮಾಡಿದ್ದು ಕಂಡುಬಂದಲ್ಲಿ ಸರಕಾರದ ಸಂಬಂಧಪಟ್ಟ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು. ಹಾಗೆಯೇ ಸಂಬಂಧಿಸಿದ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
2023-24ರ ಸಾಲಿನಲ್ಲಿ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ಸಿಬಂದಿಯಲ್ಲಿ ಆಯಾ ಜೇಷ್ಠತಾ ಘಟಕದ ಕಾರ್ಯನಿರತ ವೃಂದ ಬಲದ ಶೇ. 6ನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಮಾಡಲು ಜೂ. 1ರಿಂದ ಜು. 3ರ ವರೆಗೆ ಇಲಾಖಾ ಸಚಿವರಿಗೆ ಅವಕಾಶ ಕಲ್ಪಿಸಲಾಗಿತ್ತು.ಆದರೆ ಅವಧಿ ಮುಕ್ತಾಯಗೊಂಡ ಬಳಿಕವೂ ಇಲಾಖಾ ಹಂತದಲ್ಲಿ ವರ್ಗಾವಣೆ ಕೈಗೊಂಡು ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತಿರುವ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶ್ರೀರಂಗಪಟ್ಟಣ: ಸರ್ಕಾರ ರೈತರ ಬದುಕಿನ ಮೇಲೆ ಚಪ್ಪಡಿ ಎಳೆದಿದೆ
ಶ್ರೀರಂಗಪಟ್ಟಣ: ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರ ಬದುಕಿನ ಮೇಲೆ ಚಪ್ಪಡಿ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಚಪ್ಪಡಿ ಕಲ್ಲು ಹೊತ್ತು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದರು.
ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಮುಖಂಡರು ಬಳಿಕ ತಾಲ್ಲೂಕು ಕಚೇರಿ ಎದುರು ರಾಜ್ಯ ಸರ್ಕಾರ ಹಾಗೂ ನಿರ್ವಹಣಾ ಸಮಿತಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಇದುವರೆಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನೀರು ನಿಲ್ಲಿಸದೆ ಹೋದರೆ, ಕಾನೂನು ಭಂಗ ಚಳುವಳಿಗೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.