ಕಾಶಿಯಲ್ಲಿ ಕಮರಿಗೆ ಉರುಳಿದ ಬಸ್; 8 ಮಂದಿ ಸಾವು
ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿಯಲ್ಲಿ ಬಸ್ವೊಂದು ಕಮರಿಗೆ ಉರುಳಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. 27ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಾಖಂಡ: ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗನಾನಿ ಬಳಿ ಬಸ್ ಕಮರಿಗೆ ಬಿದ್ದ ಪರಿಣಾಮ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ʼಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಗಂಗನಾನಿ ಬಸ್ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರಲ್ಲಿ 10 ಪ್ರಯಾಣಿಕರಿಗೆ ಗಂಭೀರಗಾಯವಾಗಿದೆ ಎಂದು ಎಸ್ಡಿಆರ್ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಎಎನ್ಐಗೆ ತಿಳಿಸಿದ್ದಾರೆ.
ಗಾಯಗೊಂಡವರೆಲ್ಲರನ್ನೂ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯುಕೆ 07 ಪಿಎ 8585 ನಂಬರ್ನ ಬಸ್ ಸುಮಾರು 50 ಮೀಟರ್ ಆಳಕ್ಕೆ ಬಿದ್ದಿದೆ ಎಂದು ರಕ್ಷಣಾ ತಂಡದಲ್ಲಿದ್ದ ಕಾನ್ಸ್ಟೆಬಲ್ ಕುಲದೀಪ್ ಎನ್ನುವವರು ತಿಳಿಸಿದ್ದಾಗಿ ಎಎನ್ಎ ತಿಳಿಸಿದೆ.
ಉತ್ತರಕಾಶಿಯ ಗಂಗೋತ್ರಿ ಕಡೆಗೆ ಹೋಗುತ್ತಿದ್ದ ಬಸ್ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಗಂಗನಾನಿ ಬಳಿ ಅಪಘಾತಕ್ಕೆ ಈಡಾಗಿದೆ. ವಾಹನದಲ್ಲಿ ಸುಮಾರು 33ಕ್ಕೂ ಅಧಿಕ ಮಂದಿ ಇದ್ದರು. ಗಾಯಗೊಂಡ 27 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ರವಾನಿಸಲಾಗಿದೆ. ಡಿಎಂ ಮತ್ತು ಎಸ್ಪಿ ಉತ್ತರಕಾಶಿಯಲ್ಲಿ ಇದ್ದಾರೆ ಪೊಲೀಸರು ತಿಳಿಸಿದ್ದಾರೆ.
ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರತುರಿಗೆ ಸೂಚನೆ ನೀಡಿದ್ದಾರೆ.
ಉತ್ತರಕಾಶಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೇಮಚಂದ್ ಅಗರ್ವಾಲ್ ಅವರ ಬಳಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಜನರಲ್ ತಿಮ್ಮಯ್ಯ ವೃತ್ತಕ್ಕೆ ಗುದ್ದಿದ ಕೆಎಸ್ಆರ್ಟಿಸಿ ಬಸ್ – ನೆಲಕ್ಕುರುಳಿದ ಸೇನಾನಿ ಪ್ರತಿಮೆ
ಮಡಿಕೇರಿ: ಸೋಮವಾರ ಬೆಳ್ಳಂಬೆಳಗ್ಗೆ ಕೆಎಸ್ಆರ್ಟಿಸಿ (KSRTC) ಬಸ್ ಒಂದು ಮಡಿಕೇರಿಯ (Madikeri) ಜನರಲ್ ತಿಮ್ಮಯ್ಯ (General Thimmaiah) ವೃತ್ತಕ್ಕೆ ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ವೀರ ಸೇನಾನಿ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.
ಮಂಜಿನ ನಗರಿ ಮಡಿಕೇರಿಗೆ ಕಳಸದಂತೆ ಇದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ನಿಯಂತ್ರಣ ಕಳೆದುಕೊಂಡ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಾನ್ ಸೇನಾನಿ ಪ್ರತಿಮೆ ನೆಲಕ್ಕುರುಳಿದೆ. ಮಡಿಕೇರಿ ಡಿಪೋದಿಂದ ಬಸ್ ನಿಲ್ದಾಣದ ಕಡೆ ಹೊರಟಿದ್ದ ಬಸ್ಗೆ ಪಿಕಪ್ ವಾಹನವೊಂದು ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬಸ್ ಚಾಲಕ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಹಾಗೂ ಕಾರ್ಯನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಬಸ್ ಚಾಲಕ ಕೊಟ್ರೇಶ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದು, ಬಸ್ ಅನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೀರ ಸೇನಾನಿ ಪ್ರತಿಮೆ ನೆಲಕ್ಕೆ ಉರುಳಿದ ಸುದ್ದಿ ಕೇಳಿದ ಕೊಡಗಿನ ಜನರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ಚಾಲಕನ ಅತಿ ವೇಗದ ಚಾಲನೆಯಿಂದ ಈ ರೀತಿಯ ಘಟನೆ ನಡೆದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಮಾಜಿ ಎಂಎಲ್ಸಿ ಎಂಸಿ ನಾಣಯ್ಯ ಭೇಟಿ ನೀಡಿ ಪ್ರತಿಮೆ ಬಿದ್ದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸದ್ಯದ ಮಟ್ಟಿಗೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸುವ ಕಾರ್ಯ ನಡೆಸಿ, ತಿಮ್ಮಯ್ಯ ವೃತ್ತದ ಕಾಮಗಾರಿ ಮುಗಿಯುವರೆಗೂ ಮ್ಯೂಸಿಯಂನಲ್ಲಿ ಇಡುವಂತೆ ಚರ್ಚೆ ನಡೆಸಿದ ಬಳಿಕ ಕ್ರೇನ್ ಮೂಲಕ ಪ್ರತಿಮೆಯನ್ನು ಮ್ಯೂಸಿಯಂಗೆ ಸ್ಥಳಾಂತರ ಮಾಡಲಾಯಿತು. ಪ್ರತಿಮೆಗೆ ಸಣ್ಣ ಪುಟ್ಟ ಡ್ಯಾಮೇಜ್ ಆಗಿದ್ದು, ಪ್ರತಿಮೆ ತಜ್ಞರನ್ನು ಕರೆಸಿ ಹೆಚ್ಚಿನ ಡ್ಯಾಮೇಜ್ ಆಗಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಉಪವಿಭಾಗಧಿಕಾರಿ ಯತೀಶ್ ಉಲ್ಲಳ್ ತಿಳಿಸಿದ್ದಾರೆ.